ಹೊನ್ನಾವರ :ಕರ್ನಾಟಕ ಸರಕಾರ ಮಂಡಿಸಿದ ರಾಜ್ಯದ ಆಯ-ವ್ಯಯ ಪತ್ರದಲ್ಲಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ಹೊನ್ನಾವರ ಪಟ್ಟಣಕ್ಕೆ 128 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಮಂಜೂರಾತಿ ನೀಡಿರುವುದನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಕುರಿತು ಅವಿರತವಾಗಿ ಹೋರಾಡಿ ಮುಖ್ಯಮಂತ್ರಿಗಳಿಂದ ಯೋಜನೆಗೆ ಮುಂಜೂರಾತಿ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರನ್ನು ಅವರು ತುಂಬ ಹೃದಯದಿಂದ ಅಭಿನಂದಿಸಿ, ಹೊನ್ನಾವರ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಅವರು ಇಂದು ಹಳದೀಪುರದ ಜೀವನ ಸಭಾಭವನದಲ್ಲಿ ಹಳದೀಪುರ ಪಂಚಾಯತ ಕಾಂಗ್ರೆಸ್ ಘಟಕ ಏರ್ಪಡಿಸಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಶಾಸಕಿ ಶಾರದಾ ಎಂ. ಶೆಟ್ಟಿ ಓರ್ವ ಮಹಿಳೆಯಾಗಿ ಕಳೆದ ನಾಲ್ಕುವರೆ ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಯುವ ಮುಖಂಡ ಕೆ.ಪಿ.ಸಿ.ಸಿ. ಹಿಂದುಳಿದ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಮಾತನಾಡಿ ಶಾಸಕಿ ಶಾರದಾ ಎಂ. ಶೆಟ್ಟಿಯವರು ಅನನುಭವಿ ಅನ್ನುವ ವಿರೋಧಿಗಳ ಮಾತಿಗೆ ತಮ್ಮ ಕ್ರಿಯಾಶೀಲತೆ ಮತ್ತು ಕಾರ್ಯಕ್ಷಮತೆಯ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದರು. ಈಗಾಗಲೇ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಸರಕಾರದ ಮಟ್ಟದಿಂದ ತಂದು ಕ್ಷೇತ್ರದ ಅಭಿವೃದ್ಧಿಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ನ್ಯಾಯವಾದಿ ಜಿ. ಸಿ. ನಾಯ್ಕ ಮಾತನಾಡಿ ವಿರೋದಿಗಳ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸದಾ ಸಿದ್ದರಿರಬೇಕು ಎಂದರು. ಚುನಾವಣೆಗೆ ಸಮೀಪಿಸುತ್ತಿರುವುದರಿಂದ ವಿರೋಧ ಪಕ್ಷಗಳು ಸರಕಾರಕ್ಕೆ ಮತ್ತು ಶಾಸಕರಿಗೆ ಕೆಟ್ಟ ಹೆಸರು ತರುವಂತಹ ಕಾರ್ಯದಲ್ಲಿ ತೊಡಗಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ ಮಾತನಾಡಿ ಈಗಾಗಲೇ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು “ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮದ ಅಡಿಯಲ್ಲಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಸರಕಾರದ ಸಾಧನೆಯನ್ನು ತಿಳಿಸಿರುತ್ತಾರೆ. ಇನ್ನು ಎರಡನೇ ಹಂತದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಹಿರಿಯರ ಸಭೆ ನಡೆಸಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದರು.
ಗ್ರಾಮ ಪಂಚಾಯತ ಸದಸ್ಯೆ ನಾಗವೇಣಿ ಗೌಡ ಮಾತನಾಡಿ ನಮ್ಮ ನೆಚ್ಚಿನ ಶಾಸಕಿ ಒರ್ವ ಮಹಿಳೆಯಾಗಿ ಇಷ್ಟೊಂದು ಕ್ರಿಯಾಶೀಲರಾಗಿ, ಸಕ್ರಿಯವಾಗಿ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಂಡಿರುವುದು ಕ್ಷೇತ್ರದ ಎಲ್ಲಾ ಮಹಿಳೆಯರಿಗೆ ಹೆಮ್ಮೆಯ ವಿಷಯ ಎಂದರು. ಪಕ್ಷದ ಕಾರ್ಯಕರ್ತ ಮೋಹನ ಆಚಾರಿ ಮಾತನಾಡಿ ಪುನಃ ಎರಡನೇ ಬಾರಿ ಶಾರದಾ ಶೆಟ್ಟಿಯವರನ್ನ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುವ ಕುರಿತು ಇಂದಿನಿಂದಲೇ ಸಕ್ರಿಯರಾಗೋಣ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿನಾಯಕ ಎಸ್. ಶೇಟ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳದೀಪುರ ಘಟಕದ ಅಧ್ಯಕ್ಷ ರಾಜೇಶ್ ನಾಯ್ಕ ವಂದಿಸಿದರು