ಕುಮಟಾ: ಇಲ್ಲಿಯ ಪ್ರತಿಷ್ಠಿಯ ವಿದ್ಯಾಸಂಸ್ಥೆಯಾದ ಕೆನರಾ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಡಾ.ಆರ್.ಆರ್.ಶಾನಭಾಗ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗಿಬ್ ಹೈಸ್ಕೂಲಿನಲ್ಲಿ ನಡೆದ ಸೊಸೈಟಿಯ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಎಂ.ವಿ.ಶಾನಭಾಗ ಬುರ್ಡೇಕರ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಾನ್ಯ ಸದಸ್ಯ ಮುರಲೀಧರ ಪ್ರಭು ಅವರು ಈ ಮೊದಲು ಉಪಾಧ್ಯಕ್ಷರಾಗಿ ಸೇವೆಯಲ್ಲಿದ್ದ ಡಾ.ಆರ್.ಆರ್.ಶಾನಭಾಗ ಅವರ ಹೆಸರನ್ನು ಸೂಚಿಸಿದರು. ಸದಸ್ಯರೆಲ್ಲರೂ ಒಕ್ಕೊರಲಿನಿಂದ ಸಮ್ಮಿತಿಸಿದರು.
ಕೋಡ್ಕಣಿಯ ಜನಾನುರಾಗಿ ವೈದ್ಯರಾದ ಡಾ.ಶಾನಭಾಗ ಅವರು ಶೈಕ್ಷಣಿಕ, ವೈದ್ಯಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸದಾ ತಮ್ಮನ್ನು ತೊಡಿಗಿಸಿಕೊಂಡು ಬಂದಿದ್ದು ಉತ್ತಮ ಆಡಳಿತಕ್ಕೆ ಹೆಸರಾಗಿದ್ದಾರೆ. ತಮ್ಮ ಕಾರ್ಯಾವಧಿಯಲ್ಲಿ ಸಂಸ್ಥೆ ನಡೆಸುತ್ತಿರುವ ಗಿಬ್ ಪ್ರೌಢಶಾಲೆ, ಗಿಬ್ ಬಾಲಕೀಯರ ಪ್ರೌಢಶಾಲೆ, ಮಹಾತ್ಮಾ ಗಾಂಧಿ ಪ್ರೌಢಶಾಲೆ, ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಉನ್ನತಿಗಾಗಿ ಶ್ರಮಿಸುವುದಾಗಿ ಅವರು ನುಡಿದರು. ಸಂಸ್ಥೆಯ ಉಪಕಾರ್ಯಾಧ್ಯಕ್ಷ ಶಿರೀಷ್ ಪಿ.ನಾಯಕ ನಿಲುವಳಿ ಗೊತ್ತು ಮಾಡಿದರು.
ಡಿ.ಎಂ.ಕಾಮತ, ಮುರಲೀಧರ ಪ್ರಭು ಮೊದಲಾದವರು ಈ ಸಂದರ್ಭದಲ್ಲಿ ನಡೆದ ಬೈಲಾ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡರು. ಪ್ರಾರಂಭದಲ್ಲಿ ಕಾರ್ಯದರ್ಶಿ ಎಸ್.ಎನ್.ಪ್ರಭು ಸ್ವಾಗತಿಸಿದರು. ಗಿಬ್ ಬಾಲಕೀಯರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ರಮೇಶ ಉಪಾಧ್ಯಾಯ ಅಭಿನಂದನಾಪರ ಮಾತನಾಡಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ವಂದಿಸಿದರು. ಗೌರವ ಕಾರ್ಯದರ್ಶಿ ಕಮಲಾ ರಾವ್, ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಾದ ವಿ.ಎ.ನಿಲ್ಕುಂದ, ಮಾಧವ ಕೋಟಿ, ಕೃಷ್ಣಾದಾಸ ಪೈ ಹಾಗೂ ಸೊಸೈಟಿಯ ಗೌರವಾನ್ವಿತ ಸದಸ್ಯರು ಉಪಸ್ಥಿತರಿದ್ದರು.