ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.
ನಗರದ ಯುಬಿ ಸಿಟಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಎಂಬ ಯುವಕನ ಮೇಲೆ ಶನಿವಾರ ರಾತ್ರಿ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಆರೋಪದ ಸಂಬಂಧ ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಮೊಹಮ್ಮದ್ ನಲಪಾಡ್ ಹ್ಯಾರಿಸ್‌ರನ್ನು 6 ವರ್ಷಗಳ ಅವಧಿಗೆ ಪಕ್ಷದ ಸದಸ್ಯತ್ವದಿಂದ ಉಚ್ಛಾಟನೆ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಕಾನೂನಿ ಅನ್ವಯ ಶಿಕ್ಷೆಯಾಗಲಿದೆ. ಬೆಂಗಳೂರು ನಗರ ಪೊಲೀಸರು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.
ಹಲ್ಲೆ: ಕಾಲು ಮುರಿತದಿಂದ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ಯುಬಿ ಸಿಟಿಯ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಲು ಬಂದಿದ್ದರು. ಇದೇ ವೇಳೆ ರೆಸ್ಟೋರೆಂಟ್‌ನಲ್ಲಿ ಇದ್ದ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಕಾಲನ್ನು ಹಿಂದಕ್ಕೆ ತೆಗೆಯುವಂತೆ ಜೋರು ಮಾಡಿದ್ದಾರೆ. ಆನಂತರ ಹಲ್ಲೆ ನಡೆಸಿದ್ದಾರೆ.
ಡಾಲರ್ಸ್ ಕಾಲೊನಿ ನಿವಾಸಿಯಾಗಿರುವ ಉದ್ಯಮಿ ಲೋಕನಾಥ್ ಎಂಬುವವರ ಪುತ್ರ ವಿದ್ವತ್ ಸಿಂಗಾಪುರದಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿ ಒಂದು ತಿಂಗಳ ನಗರಕ್ಕೆ ಮರಳಿದ್ದರು. ಇದೀಗ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವಿದ್ವತ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಹಮ್ಮದ್ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೊಹಮ್ಮದ್ ನಲಪಾಡ್ ಪ್ರಕರಣದ A1 ಆರೋಪಿಯಾಗಿದ್ದು, ಇತರರ ಮೇಲೂ ಪ್ರಕರಣ ದಾಖಲಾಗಿದೆ. ಘಟನೆ ನಂತರ ಮಲ್ಯ ಆಸ್ಪತ್ರೆಗೂ ಬಂದು ವಿದ್ವತ್ ಹಾಗೂ ಆತನ ಸಹೋದರನಿಗೂ ಬೆದರಿಕೆ ಹಾಕಿ ಮೊಹಮ್ಮದ್ ನಲಪಾಡ್ ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.