ಶಿರಸಿ : ಸಾಂಬಾರು ಬೆಳೆಗಳ ಪ್ರದರ್ಶನ, ಕೊಯ್ಲೋತ್ತರ ತಂತ್ರಜ್ಞಾನ, ಮಾರುಕಟ್ಟೆ ಅವಕಾಶ ಸೇರಿದಂತೆ ಸಂಬಾರು ಬೆಳೆಗಳ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಫೆ.26ರಂದು ರಾಜ್ಯಮಟ್ಟದ ಸಂಬಾರು ಮೇಳವನ್ನು ಶಿರಸಿಯ ತೋಟಗಾರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಸೋಮವರ ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಂಜು ಎಂ.ಜಿ. ಮಾಹಿತಿ ನೀಡಿದ, ಉತ್ತರ ಕನ್ನಡ ಜಿಲ್ಲೆ ಸಂಬಾರ ಬೆಳೆಗಳಿಗೆ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಕಾಳುಮೆಣಸು, ಜಾಯಿಕಾಯಿ, ಲವಂಗ, ಶುಂಠಿ, ಅರಿಶಿಣ, ದಾಲ್ಚಿನಿ ಈ ಪ್ರದೇಶದ ಪ್ರಮುಖ ಬೆಳೆಯಾಗಿವೆ. ಇಲ್ಲಿನ ಸಂಬಾರು ಉತ್ಪನ್ನಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ಇಂತಹ ಸಂಬಾರು ಬೆಳೆಗಳ ಶ್ರೀಮಂತಿಕೆ ಸಂರಕ್ಷಿಸುವುದು ಹಾಗೂ ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶವನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಸಾಂಬಾರು ಮೇಳ ಆಯೋಜಿಸಲಾಗಿದೆ ಎಂದರು.
ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮೇಳ ಉದ್ಘಾಟಿಸುವರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್.ಜನಗೌಡರ್ ಅಧ್ಯಕ್ಷತೆ ವಹಿಸುವರು. ಕೃ.ವಿ.ವಿ. ವಿ.ಐ.ಬೆಣಗಿ ಪ್ರದರ್ಶನ ಉದ್ಘಾಟಿಸುವರು. ವಿಸ್ತರಣಾ ನಿರ್ದೇಶಕ ಎಚ್.ಬಸಪ್ಪ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಪತಂಜಲಿ ಗ್ರೂಫ್‍ನ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಕಾಳು ಮೆಣಸಿನ ಬ್ರಾಂಡ್ ಬಿಡುಗಡೆ ಮಾಡುವರು. ಕಾರ್ಯಕ್ರಮದಲ್ಲಿ ಸಂಬಾರ ಮಂಡಳಿ ಕಾರ್ಯದರ್ಶಿ ಎಸ್.ಸಿದ್ದರಾಮಪ್ಪ, ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ, ಟಿ.ಎಸ್.ಎಸ್. ಅಧ್ಯಕ್ಷ ಶಾಂತಾರಾಮ ಹೆಗಡೆ, ಟಿ.ಎಂ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಕದಂಬ ಸೌಹಾರ್ದದ ಅಧ್ಯಕ್ಷ ಶಂಭುಲಿಂಗ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ್ ಹೆಗಡೆ, ವಿಶ್ರಾಂತ ವಿಜ್ಞಾನಿ ಎಂ.ಎಸ್.ವೇಣುಗೋಪಾಲ, ಅರ್ಯ ಮಹಾವಿದ್ಯಾಲಯದ ಡೀನ್ ಎಸ್.ಕೆ.ಗಾಳಿ, ತೋಟಗಾರಿಕಾ ವಿಶ್ವವಿದ್ಯಾಲಯದ ಡೀನ್ ಎಸ್.ಐ.ಅಥಣಿ, ಪ್ರಮುಖರಾದ ಚನ್ನಪ್ಪ ಗೌಡರ್, ಶಶಿಕಾಂತ ಕೋಟಮನಿ, ಲಕ್ಷ್ಮೀನಾರಾಯಣ ಹೆಗಡೆ, ಫೆಮೀನಾ, ಆರ್.ವಿ.ಹೆಗಡೆ ಪಾಲ್ಗೊಳ್ಳುವರು.
ಸುದ್ದಿಗೋಷ್ಟಿಯಲ್ಲಿ ವಿಜ್ಞಾನಿ ಲಕ್ಷ್ಮೀನಾರಾಯಣ ಹೆಗಡೆ, ಪ್ರಮುಖರಾದ ನಾರಾಯಣ ಹೆಗಡೆ ಗಡೀಕೈ, ವಿಶ್ವೇಶ್ವರ ಭಟ್ಟ, ಕಿಶೋರ ಹೆಗಡೆ ಮುಂತಾದವರು ಇದ್ದರು.
ಸ್ಥಳೀಯವಾಗಿ ಬೆಳೆಯುವ ವಿಶಿಷ್ಟವಾದ ಕಾಳು ಮೆಣಸು, ಇತರೆ ಸಂಬಾರ ಬೆಳೆಗಳ ತಳಿಗಳ ಪ್ರದರ್ಶನ, ಸಾವಯವ ಕೃಷಿಗೆ ಉತ್ತೇಜನ, ಸಂಬಾರು ಬೆಳೆಗಾರರು ಹಾಗೂ ವ್ಯಾಪಾರಸ್ತರಿಗೆ ಸೂಕ್ತ ವೇದಿಕೆ ಕಲ್ಪಿಸಲು ಈ ಮೇಳ ಸಹಕಾರಿಯಾಗಲಿದೆ. ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ರಾಜ್ಯಗಳಿಂದ ಆಸಕ್ತ ಸಂಬಾರ ವ್ಯಾಪಾರಸ್ಥರು ಮೇಳದಲ್ಲಿ ಪಾಲ್ಗೊಳ್ಲಲಿದ್ದಾರೆ. ಅಲ್ಲದೇ, ಪ್ರಸಿದ್ಧ ಕಂನಿಗಳಾದ ಎವಿಟಿ ಕ್ರೂಪ್ಸ್, ಸೈನ್ಥಿಕ್ ಗ್ರೂಫ್, ಪತಂಜಲಿ, ಯುನಿಕಾರ್ನ್, ಪ್ರಕೃತಿ, ಯುಕೆಎನ್ ಸ್ಪೈಸ್, ನ್ಯಾಚುರಲ್ ರೆಮಿಡೀಸ್, ಶ್ರೇಷ್ಠ, ಐಐಎಸ್‍ಆರ್ ಪಾಲ್ಗೊಳ್ಳುತ್ತವೆ ಎಂದು ಮಂಜು ಎಮ್.ಜಿ. ತಿಳಿಸಿದರು.