ಶಿರಸಿ : ದೇವಿಕೆರೆಯನ್ನು ಅಭಿವೃದ್ಧಿ ಪಡಿಸಲು ಪ್ರವಾಸೋದ್ಯಮ ಇಲಾಖೆಯಿಂದ ೧ ಕೋಟಿ ರೂ.ಹಣ ಬಿಡುಗಡೆಯಾಗಿದ್ದು, ಲ್ಯಾಂಡ್ ಆರ್ಮಿಯವರು ಹೆಚ್ಚಿನ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ತಿಳಿಸಿದರು.
ಇಲ್ಲಿನ ನಗರಸಭೆ ಅಧ್ಯಕ್ಷೀಯ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವಿಕೆರೆ ಅಭಿವೃದ್ಧಿಗೆ ಸರ್ಕಾರ 2.5 ಕೋಟಿ ರೂ. ಅನುದಾನ ನೀಡಿದ್ದರೂ ಕೇವಲ 5೦ ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಕೆಲಸ ಮಾಡಲಾಗಿದೆ. ಅದಕ್ಕೂ ಮೊದಲು ನಗರಸಭೆ ವತಿಯಿಂದ ೪೦ ಲಕ್ಷ ರೂ. ವತಿಯಿಂದ ಹೂಳನ್ನು ಎತ್ತಿ ಮಾದರಿ ಕಾರ್ಯ ಮಾಡಲಾಗಿತ್ತು. ಆದರೆ ಈಗ ಪ್ರವಾಸೋದ್ಯಮ ಇಲಾಖೆಯ ಸಚಿವ ಪ್ರೀಯಾಂಕ್ ಖರ್ಗೆ ಅವರ ಸಹಕಾರದಿಂದ 1 ಕೋಟಿ ರೂ. ಹಣ ಬಿಡುಗಡೆಯಾಗಿದೆ ಎಂದರು.
ಈಗ ಬಿಡುಗಡೆಯಾಗಿರುವ ೧ ಕೋಟಿ ರೂ.ಗಳ ಎನ್.ಒ.ಸಿ. ದೊರೆತ ಮೇಲೆ ಇನ್ನುಳಿದ ೧ ಕೋಟಿ ರೂ. ಬಿಡುಗಡೆಯಾಗಲಿದೆ. ಒಟ್ಟಾರೆ 2.5 ಕೋಟಿ ರೂ.ಗಳ ಹಣದಲ್ಲಿ ದೇವಿಕೆರೆ ಅಭಿವೃದ್ಧಿ ಆಗಲಿದೆ. ಈ ಮಳೆಗಾಲದ ಒಳಗಡೆ ಪಿಚ್ಚಿಂಗ್ , ಪುಟ್ ಪಾತ್ ನಿರ್ಮಾಣ ಆಗಲಿದೆ. ಜನರಿಗೆ ಇದರಿಂದ ಅನುಕೂಲವಾಗಲಿದೆ. ಲ್ಯಾಂಡ್ ಆರ್ಮಿ ಇದರ ಯೋಜನೆ ನೀಡಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ ಎಂದು ತಿಳಿಸಿದ ಅವರು, ಮೊದಲು ಅನುದಾನ ಬಿಡುಗಡೆಗೆ ಪ್ರಯತ್ನಿಸಿದ್ದ ದೇಶಪಾಂಡೆ ಅವರಿಗೂ, ಈಗ ಅನುದಾನ ದೊರೆಯಲು ಕಾರಣವಾಗಿದ್ದ ಪ್ರೀಯಾಂಕ್ ಖರ್ಗೆ ಅವರಿಗೂ ಕೃತಜ್ಞತೆ ಸಲ್ಲಿಸಿದರು.
ರಾಜ್ಯ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಗೆ ರಸ್ತೆ ಅಭಿವೃದ್ಧಿ ಹಾಗೂ ಗದ್ದುಗೆಯ ಅಭಿವೃದ್ಧಿ ಗೆ 25 ಲಕ್ಷ ರೂ. ವಿಶೇಷ ಅನುದಾನ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿದೆ.ಪ್ರವಾಸೋದ್ಯಮ ಸಚಿವ ಪ್ರೀಯಾಂಕ್ ಖರ್ಗೆ ಅವರ ಮುತವರ್ಜಿಯಿಂದ ದೇವಿಯ ಜಾತ್ರೆಯ ಅಂಗವಾಗಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಗೆ 25 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿ, ಆದೇಶ ಪತ್ರವನ್ನೂ ಸಹ ಮಾಧ್ಯಮ ಗಳಿಗೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪ್ರಾನ್ಸಿಸ್ ನೊರಾನ್ಹೋ , ಪೌರಾಯುಕ್ತ ಮಹೇಂದ್ರ ಕುಮಾರ ಇದ್ದರು.