ಭಟ್ಕಳ: ತಾಲೂಕಿನ ಸರ್ಪನಕಟ್ಟೆಯಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ ವಸತಿ ಗೃಹ ಪಾಳು ಬಿದ್ದಿದ್ದು ಯಾವುದೇ ಉಪಯೋಗಕ್ಕೆ ಬಾರದ ರೀತಿಯಲ್ಲಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ವಸತಿ ಗೃಹವೂ ಬಳಕೆಯಲ್ಲಿದ್ದು, ಈ ಭಾಗದ ಇಲಾಖೆಯ ಬೀಟ್ ಗಾರ್ಡ್‍ಗಳಿಗೆ ಇದನ್ನು ನೀಡಲಾಗಿತ್ತು.

ಇತ್ತೀಚಿನ ವರ್ಷದಲ್ಲಿ ಈ ವಸತಿ ಗೃಹದ ಬಳಕೆ ನಿಂತಿದ್ದು, ಇಲ್ಲಿ ಒಂದು ಹಳೆಯ ಹಾಗೂ ಇನ್ನೊಂದು ಸುಸ್ಥಿತಿಯಲ್ಲಿರುವ ಎರಡು ವಸತಿ ಗೃಹಗಳಿವೆ. ಇನ್ನು ಇಲ್ಲಿನ ವಸತಿ ಗೃಹದ ಮೇಲ್ಛಾವಣಿ ಇಲ್ಲವಾಗಿದ್ದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಇದರಲ್ಲಿ ಸುಸ್ಥಿತಿಯಲ್ಲಿರುವ ಇನ್ನೊಂದು ವಸತಿ ಗೃಹವೂ ಕೂಡಾ ಕೆಲವು ವರ್ಷಗಳಿಂದ ಬೀಗ ಜಡಿದುಕೊಂಡಿದೆ. ವಸತಿ ಗೃಹದಲ್ಲಿ ವಿದ್ಯುತ್, ನೀರು ಹಾಗೂ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎನ್ನಲಾಗುತ್ತಿದ್ದು, ವಸತಿಗೆ ಯೋಗ್ಯವಲ್ಲದ ರೀತಿಯಲ್ಲಿ ಕಂಡು ಬರುತ್ತಿದೆ. ತೀರಾ ನಿರ್ಜನ ಪ್ರದೇಶದ ರೀತಿಯಲ್ಲಿ ವಸತಿ ಗೃಹದ ಸುತ್ತಮುತ್ತದ ವಾತಾವರಣ ಸೃಷ್ಟಿಯಾಗಿದೆ.

RELATED ARTICLES  ಜಿಲ್ಲೆಯಾದ್ಯಂತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪರವಾನಿಗೆ ಹೊಂದಿರುವ ಬಂದೂಕು ಹಾಗೂ ಪರವಾನಿಗೆ ರಹಿತ ಬಂದೂಕುಗಳ ಮಾಹಿತಿ ಪರಿಶೀಲನೆ.

ಸರ್ಪನಕಟ್ಟೆಯ ಹೆದ್ದಾರಿಗೆ ಹೊಂದಿಕೊಂಡೆ ಇರುವ ಈ ವಸತಿ ಗೃಹ ಉತ್ತಮ ಪ್ರದೇಶದಲ್ಲಿದೆ. ಈ ಮೊದಲು ಕೂಡಾ ಕೆಲವು ಇಲಾಖೆ ಗಾರ್ಡಗಳು ಇಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಇಲಾಖೆಯೂ ಈ ವಸತಿ ಗೃಹವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ. ಅದರಲ್ಲು ಈಗಿರುವ ವಸತಿ ಗೃಹವೂ ಕೂಡಾ ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆಗೆ ತಲುಪುವ ಸಾಧ್ಯತೆ ಎಂದು ಕಾಣುತ್ತಿದೆ. ಇನ್ನು ಕುಡಿಯುವ ನೀರಿಗಾಗಿ ತೋಡಲಾಗಿದ್ದ ಬಾವಿಯೂ ಕೂಡಾ ಹಾಳು ಕೊಂಪೆಯಾಗಿದ್ದು, ವಸತಿ ಗೃಹದ ಸುತ್ತಲು ಮರಗಿಡಗಳು ಬೆಳೆದುಕೊಂಡಿವೆ. ಅಲ್ಲದೇ ಈ ವಸತಿ ಗೃಹ ಇರುವ ಜಾಗ ಈಗ ಕಸ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಎಸೆಯುವಂತಹ ಸ್ಥಳವಾಗಿ ಬದಲಾಗಿದೆ. ಕೇವಲ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ, ಸುಂದರ ಇಕೋ ಪಾರ್ಕ್‍ಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅರಣ್ಯ ಇಲಾಖೆ ಭಟ್ಕಳದ ಈ ತಮ್ಮದೇ ಆದ ವಸತಿ ಗೃಹವೊಂದನ್ನು ಪಾಳು ಬಿಟ್ಟಿರುವುದು ಬೇಸರದ ಸಂಗತಿ ಎಂಬುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.

RELATED ARTICLES  ವ್ಯಕ್ತಿ ಮೇಲೆ ಕರಡಿ ದಾಳಿ; ಗಂಭೀರ ಗಾಯ

ಇಲ್ಲಿನ ವಸತಿ ಗೃಹಕ್ಕೆ ಸ್ವಲ್ಪವೇ ಸ್ವಲ್ಪ ಕಾಯಕಲ್ಪ ನೀಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಉತ್ತಮ ವಾಸ್ತವ್ಯದ ಮನೆಯೊಂದು ಅರಣ್ಯ ಇಲಾಖೆಗೆ ಸಿಗುವುದರ ಜೊತೆಗೆ ಸಿಬ್ಬಂದಿಗಳಿಗೆ ಅನೂಕೂಲವಾಗಲಿದೆ. ತಮ್ಮ ಸಿಬ್ಬಂದಿಗಳ ಅನುಕೂಲಕ್ಕಾಗಿ ಕಟ್ಟಿಸಿದ್ದ ವಸತಿಗೃಹಗಳ ನಿರ್ವಹಣೆ ಮಾಡಿ ಪುನಃ ಅದು ಬಳಕೆಯಾಗುವಂತೆ ಮಾಡಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.