ಸುಬ್ರಹ್ಮಣ್ಯ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಬೆಳಿಗ್ಗೆ ಕುಕ್ಕೆ ದೇವರ ದರ್ಶನ ಪಡೆದರು.
ಇದಾದ ಬಳಿಕ ವಿದ್ಯಾಪ್ರಸನ್ನ ಶ್ರೀಗಳನ್ನು ಅಮಿತ್ ಶಾ ಭೇಟಿ ಮಾಡಿದರು. ದೇವಸ್ಥಾನದಲ್ಲಿ ಆಶ್ಲೇಷ ಬಲಿ ಸೇವೆ ಮಾಡಿಸದೆ ಕೇವಲ ದರ್ಶನ ಪಡೆದರು. ವಿಶೇಷ ಪೂಜೆ ಮಾಡಿಸಿದರು.
ಅಮಿತ್ ಶಾ ಅನಾರೋಗ್ಯ ನಿಮಿತ್ತ ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮಗಳು ಸ್ವಲ್ಪ ವಿಳಂಬವಾಗಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶ ಮೂಲಕ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಇಲ್ಲಿ ಶಂಖನಾದ ಮೊಳಗಿಸುವರು.
ಶಾ ಅವರು ಸೋಮವಾರ ರಾತ್ರಿ 10ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಆದಿಶೇಷ ವಸತಿಗೃಹಕ್ಕೆ ಬಂದ ಅವರನ್ನು ಕೇರಳದ ಚೆಂಡೆ ವಾದನಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಸಂಸದ ನಳಿನ್‍ಕುಮಾರ್ ಕಟೀಲ್ ಉಪಸ್ಥಿತರಿದ್ದರು.
ದೇಗುಲದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಪೆರಾಲು ಸ್ವಾಗತಿಸಲಾಗಿತ್ತು. ಬಿಜೆಪಿ ನಾಯಕರು, ಕಾರ್ಯಕರ್ತರು, ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.