ಹೊನ್ನಾವರ : ತಾಲೂಕಾ ಮಡಿವಾಳರ ಸಂಘದ 18 ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಹೊನ್ನಾವರದ ಅಂಬೇಡ್ಕರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಮಡಿವಾಳ ಸಮಾಜ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ನಿಟ್ಟಿನಲ್ಲಿ ಉತ್ತಮ ಸಂಘಟನೆಯೊಂದಿಗೆ ಕಳೆದ 18 ವರ್ಷಗಳಿಂದ ಸ್ನೇಹ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಶ್ಲಾಘನೀಯವಾಗಿದೆ. ಈ ಸಮಾಜದ ಸಭಾನವನದ ನಿರ್ಮಾಣಕ್ಕಾಗಿ ಸರಕಾರದಿಂದ 25 ಲಕ್ಷ ರೂ.ಗಳು ಮಂಜೂರಾಗಿದ್ದು ಹೆಚ್ಚಿನ ಕೆಲಸವಾಗಿದ್ದರೂ ಕೂಡಾ ಕೇವಲ 6.25 ಲಕ್ಷ ರೂ.ಗಳು ಮಾತ್ರ ಬಿಡುಗಡೆಯಾಗಿದ್ದು ಈ ಕಾರ್ಯ ನೆನೆಗುದಿಗೆ ಬಿದ್ದಿದೆ. ಸಮಾಜ ಬಾಂಧವರ ಹಾಗೂ ಸ್ಥಳೀಯ ದಾನಿಗಳ ಧನಸಹಾಯದಿಂದ ನಿರ್ಮಾಣದ ಕಾರ್ಯ ಕೈಗೊಳ್ಳುತ್ತಿದ್ದು ಸರಕಾರ ಇದುವರೆಗೂ ಪೂರ್ಣ ಪ್ರಮಾಣದ ಅನುದಾನವನ್ನು ಬಿಡುಗಡೆಗೊಳಿಸದೇ ಇರುವುದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡದ ನಿರ್ಮಾಣಕ್ಕೆ ನನ್ನ ವೈಯಕ್ತಿಕ ಹಾಗೂ ಇತರೇ ಮೂಲಗಳಿಂದ ಸಹಾಯ ನೀಡುವ ಭರವಸೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಮೇಲೆ ಪ್ರಹಾರ ನಡೆಯುತ್ತಿದ್ದು ಪರೇಶ ಮೇಸ್ತ ಹಾಗೂ ಶರತ್ ಮಡಿವಾಳರ ಸಾವು ನಮ್ಮ ಧರ್ಮವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಡೆದ ಕೃತ್ಯವಾಗಿದ್ದು ನಮ್ಮ ಧರ್ಮವನ್ನು ರಕ್ಷಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದ್ದು ಆ ನಿಟ್ಟಿನಲ್ಲಿ ನಾವೆಲ್ಲ ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವೆಂಕಟೇಶ ಮಡಿವಾಳ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಕಡ್ಲೆ ಗ್ರಾ. ಪಂ. ಸದಸ್ಯರಾದ ಗಜಾನನ ಎಸ್. ಮಡಿವಾಳ, ವರದಿಗಾರರಾದ ಜಿ. ಯು. ಭಟ್ಟ, ನಾಗೇಶ ಎಮ್. ಮಡಿವಾಳ, ಅನಿಲ ಎನ್. ಮಡಿವಾಳ, ವಿನಾಯಕ ಎಮ್. ಮಡಿವಾಳ, ಉಲ್ಲಾಸ ಜಿ. ಮಡಿವಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಇನ್ನಿತರೇ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.