ಕಾರವಾರ: ಶಿರಸಿ ಮಾರಿಕಾಂಬಾ ದೇವಿ ಜಾತ್ರೆಯ ನಿಮಿತ್ತ ಫೆ.27 ರಿಂದ ವಾ.ಕ.ರ.ಸಾ.ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.
ಶಿರಸಿ ಹಳೇ ಬಸ್ ನಿಲ್ದಾಣದ ಸುತ್ತಮುತ್ತ ಜಾತ್ರಾ ಅಂಗಡಿ-ಮುಗ್ಗಟ್ಟುಗಳ ಮಳಿಗೆಗಳು ಇರಲಿರುವುದರಿಂದ ಸಂಚಾರಕ್ಕೆ ತೊಂದರೆಯಾಗದಂತೆ ಫೆ.25 ರ ಮುಂಜಾನೆಯಿಂದ ಹಳೇ ಬಸ್ ನಿಲ್ದಾಣದ ಸಾರಿಗೆ ಕಾರ್ಯಾಚರಣೆಗಳನ್ನು ಹೊಸ ಬಸ್ ನಿಲ್ದಾಣದಿಂದ ನಿರ್ವಹಿಸಲಾಗುತ್ತದೆ.
ಜಾತ್ರೆಗೆ ಬರುವ ಭಕ್ತಾಧಿಗಳಿಗೆ ವಿಶೇಷ ಸಾರಿಗೆ ಕಲ್ಪಿಸಲು ಹೆಚ್ಚುವರಿಯಾಗಿ 110 ವಾಹನಗಳನ್ನು ಶಿರಸಿಯಿಂದ ಹಾನಗಲ್, ಹುಬ್ಬಳ್ಳಿ, ಗದಗ, ಲಕ್ಷ್ಮೇಶ್ವರ, ಸಿದ್ದಾಪೂರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ, ಯಲ್ಲಾಪುರ, ದಾಂಡೇಲಿ, ಅಂಕೋಲಾ ಹಾಗೂ ಬೇಡಿಕೆಯ ಮೇರೆಗೆ ವಿಶೇಷ ಸಾರಿಗೆಗಳನ್ನು ಕಲ್ಪಿಸಲಾಗುವುದು.
ಜಾತ್ರೆಯ ದಿನಗಳಲ್ಲಿ ಹಾನಗಲ್ ಹಾವೇರಿ, ಹುಬ್ಬಳ್ಳಿ ಕಡೆಗೆ ಹೋಗುವ ಸಾರಿಗೆಗಳನ್ನು ಶಿರಸಿ ಹೊಸಬಸ್ ನಿಲ್ದಾಣದಿಂದ ವಿಕಾಸಾಶ್ರಮ, ಎ.ಪಿ.ಎಂ.ಸಿ., ಶಿರಸಿ ಘಟಕ, ವಿವೇಕಾನಂದ ನಗರ ಕ್ರಾಸ್, ಚಿಪಗಿ ಕ್ರಾಸ್ ಮಾರ್ಗದಲ್ಲಿ ಸಂಚರಿಸುತ್ತವೆ. ಮಾರಿಕಾಂಬಾ ದೇವಸ್ಥಾನ ಮುಂದಿನ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ನಿಷೇದಿಸಿರುವುದರಿಂದ ಬನವಾಸಿ ಮಾರ್ಗದ ಬಸ್‍ಗಳು ರಾಮನಬೈಲ್ ಕ್ರಾಸ್‍ನಿಂದ ಸಂಚರಿಸಲಿವೆ. ಸಿದ್ದಾಪುರ, ಸಾಗರ, ಕುಮಟಾ, ಹೊನ್ನಾವರ, ಬೈಂದೂರು, ಕುಂದಾಪುರ ಬಸ್ಸುಗಳು ಶಿರಸಿ ಹೊಸ ಬಸ್ ನಿಲ್ದಾಣದಿಂದ ಪದ್ಮಶ್ರೀ ಸರ್ಕಲ್, ಹನುಮಾನ ವ್ಯಾಯಾಮ ಶಾಲೆ ಮುಖಾಂತರ ಸಂಚರಿಸುತ್ತವೆ. ಪ್ರಾಯಾಣಿಕರ ಅನುಕೂಲಕ್ಕಾಗಿ ವಿಕಾಸಾಶ್ರಮ ಕ್ರಾಸ್, ಎ.ಪಿ.ಎಂ.ಸಿ. ಕ್ರಾಸ್(ಹುಬ್ಬಳ್ಳಿ ರಸ್ತೆ), ಹನುಮಾನ ವ್ಯಾಯಾಮ ಶಾಲೆ ಆವರಣ ಮತ್ತು ರಾಯಪ್ಪ ಹುಲೇಕಲ್ ಶಾಲಾ ಆವರಣದಲ್ಲಿ ತಾತ್ಕಾಲಿಕ ಬಸ್ ತಂಗುದಾಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
ಹೊಸ ಬಸ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗುವುದು. ಹಳೇ ಬಸ್ ನಿಲ್ದಾಣದ ಮುಂಗಡ ಟಿಕೇಟ್ ರಿಸರ್ವೇಶನ್ ಕೌಂಟರ್ ಸಹ ಮುಂದುವರೆಸಲಾಗುವುದು.
ಸಾರಿಗೆ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿರಸಿ ಘಟಕ ವ್ಯವಸ್ಥಾಪಕರ ಮೊ: 7760991725/7760991712 ಮತ್ತು 08384-229952/226380 ಸಂಪರ್ಕಿಸಬಹುದಾಗಿದೆ ಎಂದು ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.