ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದ ಪಕ್ಕದಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿ ನಿರ್ಮಿಸಿದ ಚಿಕ್ಕ ಉದ್ಯಾನ ಮಕ್ಕಳಿಗಾಗಿ ಕಾಯುತ್ತಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 8ರವರೆಗೆ ಈ ಉದ್ಯಾನ ತೆರೆದಿರುತ್ತದೆ. ಇದು ಕೆಲವೊಮ್ಮೆ ಮಕ್ಕಳಿಂದ ತುಂಬಿದ್ದರೆ, ಕೆಲ ಸಮಯ ಖಾಲಿ ಹೊಡೆಯುತ್ತಿರುತ್ತದೆ. ಇದನ್ನು ಉದ್ಯಾನ ಎನ್ನುವುದಕ್ಕಿಂತ ಮಕ್ಕಳ ಆಟದ ಅಂಗಳ ಎಂದರೆ ಹೆಚ್ಚು ಸೂಕ್ತ.
ಈ ಸ್ಥಳ 30 ಗುಂಟೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಮಕ್ಕಳಿಗಾಗಿ ಜಾರು ಬಂಡಿ, ಜೋಕಾಲಿ ಸೇರಿದಂತೆ ಆಟವಾಡುವ ವ್ಯವಸ್ಥೆ ರೂಪಿಸಲಾಗಿದೆ. ಸಾರ್ವಜನಿಕರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಇಡಲಾಗಿದೆ. ಓಡಾಡುವ ದಾರಿ ನಿರ್ಮಿಸಲಾಗಿದೆ. ನೆರಳು ನೀಡಲು ಮೂರು ದೊಡ್ದ ಮರಗಳಿವೆ. ಈ ಉದ್ಯಾನದೊಳಗೆ ಮೊದಲೇ ನಿರ್ಮಿಸಿದ್ದ ಶೌಚಾಲಯ ಹಾಗೂ ಬಾವಿ ಸೇರಿದೆ. ಕಳೆದ 4–5 ವರ್ಷಗಳಿಂದ ಹಂತ ಹಂತವಾಗಿ ಈ ಉದ್ಯಾನವನ್ನು ಪಟ್ಟಣ ಪಂಚಾಯ್ತಿ ನಿರ್ಮಿಸಿದೆ.
ಈ ಉದ್ಯಾನದ ಪಕ್ಕದಲ್ಲಿಯೇ ನೆಹರೂ ಮೈದಾನವಿದ್ದು, ಐತಿಹಾಸಿಕ ಹಿನ್ನೆಲೆಯನ್ನೂ ಮೈದಾನ ಹೊಂದಿದೆ. 1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ ನೆಹರೂ ಅವರ ಕಾರ್ಯಕ್ರಮವನ್ನು ಇದೇ ಮೈದಾನದಲ್ಲಿ ಕಾಂಗ್ರೆಸ್ ಧುರೀಣ ದಿವಂಗತ ಗೋವಿಂದ ಶಾನಭಾಗ ಅವರ ಮುಂದಾಳತ್ವದಲ್ಲಿ ಏರ್ಪಡಿಸಲಾಗಿತ್ತು.
ನೆಹರೂ ಅವರು ಭಾಷಣ ಮಾಡಲು ಕಟ್ಟೆಯನ್ನು ಹಾಗೂ ವೇದಿಕೆಯನ್ನು ಕೂಡ ಗೋವಿಂದ ಶಾನಭಾಗರು ಮಾಡಿಸಿದ್ದರು ಎಂಬ ವಿವರ ‘ಸ್ವಾತಂತ್ರ್ಯ ಯೋಧ ಗೋವಿಂದ ಶಾನಭಾಗ‘ ಎಂಬ ಪುಸ್ತಕದಲ್ಲಿ ಲಭ್ಯವಾಗುತ್ತದೆ. ಹುಡದಿ ಬಯಲು ಎಂದು ಕರೆಯಲಾಗುತ್ತಿದ್ದ ಈ ಮೈದಾನಕ್ಕೆ ಈ ಮೂಲಕ ನೆಹರೂ ಮೈದಾನ ಎಂದು ಹೆಸರಿಡಲಾಯಿತು ಎಂದು ಹಿರಿಯರು ಸ್ಮರಿಸಿಕೊಳ್ಳುತ್ತಾರೆ.
ನೆಹರೂ ಮೈದಾನ ಯಾವಾಗಲೂ ಚಟುವಟಿಕೆಯ ಕೇಂದ್ರವಾಗಿದ್ದು, ಇಲ್ಲಿ ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳು, ಯಕ್ಷಗಾನ,ನಾಟಕ, ಸಭೆ ಸಮಾರಂಭಗಳು ಯಾವಾಗಲೂ ನಡೆಯುತ್ತವೆ. ಆದ್ದರಿಂದ ಮೈದಾನದ ಪಕ್ಕದ ಉದ್ಯಾನದ ಉಪಯೋಗ ಸಾರ್ವಜನಿಕರಿಗೆ ಆಗುತ್ತದೆ ಎಂಬುದು ಪಟ್ಟಣ ಪಂಚಾಯ್ತಿ ಮೂಲಗಳ ಹೇಳಿಕೆ.
‘ನೆಹರೂ ಮೈದಾನದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ಈ ಉದ್ಯಾನ ಹಾಗೂ ಶೌಚಾಲಯದಿಂದ ಅನುಕೂಲವಾಗಿದೆ. ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಶೌಚಾಲಯವನ್ನು ಸಾರ್ವಜನಿಕರು ಉಪಯೋಗ ಮಾಡುತ್ತಾರೆ. ಈ ಉದ್ಯಾನಕ್ಕೂ ಭೇಟಿ ನೀಡುತ್ತಾರೆ’ ಎಂದು ಪಟ್ಟಣ ಪಂಚಾಯ್ತಿ ಎಂಜಿನಿಯರ್ ರಮೇಶ ನಾಯ್ಕ ಹೇಳುತ್ತಾರೆ.
‘ಈ ಉದ್ಯಾನದಲ್ಲಿರುವ ಆಟದ ವ್ಯವಸ್ಥೆ ಉತ್ತಮವಾಗಿದ್ದು, ಗಟ್ಟಿಮುಟ್ಟಾಗಿದೆ. ಇಲ್ಲಿರುವ ಶೌಚಾಲಯದ ಉಪಯೋಗ ಮಾಡುವವರಿಗೆ ಶುಲ್ಕ ನಿಗದಿ ಮಾಡಬಹುದು. ಆದರೆ ಅದಕ್ಕೆಲ್ಲ ಸಿಬ್ಬಂದಿ ಅಗತ್ಯ’ ಎಂಬುದು ಅವರ ಅಭಿಪ್ರಾಯ.