ಕರಾವಳಿ ಬಾಯ್ಸ್ ಗೋಕರ್ಣ ಇವರ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಗೋಕರ್ಣದ ಮುಖ್ಯ ಸಮುದ್ರ ತೀರದಲ್ಲಿ ಹಗ್ಗ ಜಗ್ಗಾಟ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಈ ಸ್ಪರ್ಧಾ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕರಾವಳಿ ಬಾಯ್ಸ್ ಸಂಘಟನೆಯವರು ಕಡಲ ತೀರದಲ್ಲಿ ಸುಂದರವಾದ ಭವ್ಯ ವೇದಿಕೆಯನ್ನು ನಿರ್ಮಿಸಿ ಇಂತಹ ವಿಶಿಷ್ಟ ಸ್ಪರ್ಧಾ ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ಸಂಘಟಿಸಿದ್ದಾರೆ. ಈ ಹಗ್ಗ ಜಗ್ಗಾಟ ಸ್ಪರ್ಧೆಯು ದೇಶೀಯ ಕಲೆಯಾಗಿದ್ದು ಬಲ ಪ್ರದರ್ಶನದೊಂದಿಗೆ ಮನರಂಜನೆ ನೀಡುವ ವಿಶೇಷ ಕ್ರೀಡೆಯಾಗಿದೆ. ಕರಾವಳಿ ಮಣ್ಣಿನ ಮಕ್ಕಳು ದೈಹಿಕವಾಗಿ ಸದೃಢರಾಗಿದ್ದು ಉತ್ತಮ ಬುದ್ದಿಮತ್ತೆ ಹೊಂದಿದವರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ತಮ್ಮ ಒಗ್ಗಟ್ಟು ಮತ್ತು ಬಲವನ್ನು ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಈ ಸಂಘಟನೆಯವರು ತಮ್ಮ ಸಂಘಟನಾ ಚಾತುರ್ಯವನ್ನು ಮೆರೆದಿದ್ದಾರೆ. ಇಂತಹ ಸಂಘಟನೆಗಳು ಇನ್ನೂ ಬಲಗೊಳ್ಳುವುದರ ಮೂಲಕ ಅಭಿವೃದ್ದಿಗೆ ಸಹಕಾರವಾಗುತ್ತದೆ. ಸರಕಾರದಿಂದ ಘೋಷಿತ ಕಾರ್ಯಕ್ರಮಗಳನ್ನು ಬಡವರ ಮನೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ತಮ್ಮ ಮನದಾಳದ ಆಶಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕಾ ಪಂಚಾಯತ್ ಸದಸ್ಯರಾದ ಮಹೇಶ ಶೆಟ್ಟ್ಷಿ ಅವರು ಮಾತನಾಡಿ ಈ ಕಾರ್ಯಕ್ರಮವು ಅನೇಕ ವರ್ಷಗಳಿಂದ ಯಶಸ್ವಿಯಾಗಿ ಜರುಗುತ್ತಿದ್ದು ಈ ವರ್ಷವೂ ಕೂಡಾ ಉತ್ತಮ ರೀತಿಯಲ್ಲಿ ಈ ಕ್ರೀಡಾ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಸಂಘಟಕರ ಸಂಘಟನಾ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ಇನ್ನೂ ಅದ್ದೂರಿಯಾಗಿ ಜರುಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶ್ರೀ ಮಹೇಶ ಎನ್. ಮೂಡಂಗಿ, ಶ್ರೀ ವೆಂಕಟರಮಣ ಕವರಿ, ಶ್ರೀನಿವಾಸ ಎಸ್.ಕುರ್ಲೆ ಮತ್ತು ಶ್ರೀ ಮಂಕಾಳಿ ಅಂಬಿಗ ಮುಂತಾದವರು ಉಪಸ್ಥಿತರಿದ್ದರು. ಅಪಾರ ಜನಸ್ತೋಮದ ನಡುವೆ ಈ ಸ್ಪರ್ಧಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.