ಕಾರವಾರ: ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರಕ್ಕಾಗಿ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ಧಿಷ್ಟಾವಧಿ ಮಹಾಧರಣಿಯನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ನಡೆಸಿತು.

ಅರಣ್ಯ ಭೂಮಿ ಸಾಗುವಳಿದಾರರು ಮತ್ತು ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಅರಣ್ಯವಾಸಿಗಳಿಗೆ ಸರಕಾರ ನೀಡಿದ ಆಶ್ವಾಸನೆ ಹುಸಿಯಾಗುತ್ತಿದೆ. ಪುನಃ ಪುನಃ ಅರ್ಜಿಗಳ ಪರಿಶೀಲನೆ ಎಂಬ ನೆಪದಲ್ಲಿ ತಿರಸ್ಕಾರವನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಸರಕಾರದ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1,17,881 ಅರ್ಜಿಗಳಲ್ಲಿ 70 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನಷ್ಟು ಅರ್ಜಿಗಳನ್ನು ತಿರಸ್ಕರಿಸಲು ಬರದ ಸಿದ್ಧತೆ ನಡೆದಿದೆಎಂದು ಆರೋಪಿಸಿದರು.

ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಪ್ರಥಮ ಆದ್ಯತಾ ಕೆಲಸವಾಗಿ ಅರಣ್ಯ ಅತಿಕ್ರಮಣ ಭೂಮಿ ಮಂಜೂರಿ ಎಂದು ಆಶ್ವಾಸನೆ ನೀಡಿದ್ದರು. 5 ವರ್ಷ ಕಳೆಯುತ್ತ ಬಂದು ಇನ್ನೊಂದು ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸಿವೆ. ಜಿಲ್ಲೆಯ ಲಕ್ಷಾಂತರ ಕುಟುಂಬಗಳಿಗೆ ಭೂಮಿ ಹಕ್ಕನ್ನು ನೀಡಲು ಮಾತ್ರ ಉದಾಸೀನ ಮಾಡಿದ್ದಾರೆ. ಇನ್ನುಳಿದ ಒಂದೆರಡು ತಿಂಗಳ ಅವಧಿಯಲ್ಲಾದರೂ ಅರಣ್ಯ ಅತಿಕ್ರಮಣದಾರರಿಗೆ ನೀಡಿದ ಆಶ್ವಾಸನೆ ಜಾರಿ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಈ ಅನಿರ್ಧಿಷ್ಟಾವಧಿ ಮಹಾಧರಣಿಯನ್ನು ಸಂಘಟಿಸಲಾಗಿದೆ ಎಂದು ತಿಳಿಸಿದರು.

RELATED ARTICLES  ಅಡಿಕೆ ಧಾರಣೆ ಕುಸಿತ : ಆತಂಕಪಡುವ ಅಗತ್ಯ ಇಲ್ಲ

ನಗರದ ಮಾಲಾದೇವಿ ಮೈದಾನದಿಂದ ಬೃಹತ್ ಮೆರವಣಿಗೆ ಏರ್ಪಡಿಸಲಾಗಿತ್ತು. ಪ್ರಮುಖ ಬೇಡಿಕೆಗಳಾದ ಸರಕಾರದ ಸುತ್ತೋಲೆ ದಿನಾಂಕ 8-3-2017ರ ಪ್ರಕಾರ 75 ವರ್ಷ ಅತಿಕ್ರಮಣ ಜಾಗದಲ್ಲಿ ಸಾಗುವಳಿ ಮಾಡುತ್ತಿರಬೇಕು ಎನ್ನುವುದನ್ನು ಬದಲಿಸಿ ಗ್ರಾಮದಲ್ಲಿ ವಾಸವಿದ್ದರೆ ಸಾಕು ಎಂದು ಹೇಳಲಾಗಿದೆ. ಇದನ್ನು ಪರಿಗಣಿಸಿ ಅರ್ಜಿದಾರರಿಗೆ ಅರಣ್ಯ ಹಕ್ಕು ನೀಡಬೇಕು. ತಿರಸ್ಕರಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು. ಗ್ರಾಮ ಪಂಚಾಯತಗಳಲ್ಲಿ ಇನ್ನೂ ಬಾಕಿಯಿರುವ ಅರ್ಜಿಗಳನ್ನು ತಾಲೂಕು ಮಟ್ಟದ ಕಛೇರಿಗೆ ತರಿಸಿಕೊಂಡು ಮಂಜೂರಿಗೆ ಕ್ರಮ ತೆಗೆದುಕೊಳ್ಳಬೇಕು. ಜಿ.ಪಿ.ಎಸ್. ಕೂಡಲೇ ಪೂರ್ತಿಗೊಳಿಸಬೇಕು. ನಗರ ವ್ಯಾಪ್ತಿಯ ಅರಣ್ಯ ವಾಸಿಗಳ ಅರ್ಜಿಗಳನ್ನು ಮಂಜೂರಿಗೆ ಪರಿಗಣಿಸಬೇಕು. ಬಗರ ಹುಕುಂ ಮಂಜೂರಿದಾರರ ಹೆಸರನ್ನು ಆರ್.ಟಿ.ಸಿ. 9ರ ಕಾಲಂನಲ್ಲಿ ದಾಖಲಿಸಿ, ಮನೆ ನಿವೇಶನ ನೀಡಬೇಕೆಂದು ಒತ್ತಾಯಿಸಲಾಯಿತು. ಸಂಜೆಯ ವೇಳೆಗೆ ಧರಣಿಯನ್ನು ಹಿಂಪಡೆದು ನಾಳೆ ಬೆಂಗಳೂರು ಚಲೋ ಹಮ್ಮಿಕೊಳ್ಳುವುದಾಗಿ ತಿಳಿಸಲಾಯಿತು.

RELATED ARTICLES  ಕುಮಟಾದಲ್ಲಿ ಮತ್ತೊಮ್ಮೆ "ದಿಗ್ವಿಜಯ ರಥಯಾತ್ರೆ" : ವಿವೇಕಾನಂದರ ಸ್ಮರಣೆಯ ಜೊತೆಗೆ ಸೋದರಿ ನಿವೇದಿತಾಳ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದ ಕಾರ್ಯಕ್ರಮ.