ಭಟ್ಕಳ: ಕೆಲವೇ ದಿನಗಳಲ್ಲಿ ರಾಜ್ಯ ವಿಧಾನ ಸಭೆಗೆ ಘೋಷಣೆಯಾಗಲಿರುವ ಚುನಾವಣೆಗೆ ಎಲ್ಲಾ ಪಕ್ಷಗಳು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕೆಲವು ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಕಸರತ್ತು ಜೋರಾಗಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹಿಂದೆಂದೂ ಕಂಡು ಬಾರದಷ್ಟು ಆಕಾಂಕ್ಷಿಗಳು ಆಸಕ್ತಿ ತೋರುತ್ತಿದ್ದಾರೆ. 10ಕ್ಕೂ ಅಧಿಕ ಆಕಾಂಕ್ಷಿಗಳು ತಮಗೆ ಟಿಕೆಟ್ ದೊರೆ ಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಯುವ ಉದ್ಯಮಿ, ಹಾಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ ಕಾಂಗ್ರೆಸ್‌ನಿಂದ ಬಂದವರು. ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ ಆಪ್ತರಲ್ಲಿ ಒಬ್ಬರಾಗಿರುವ ಅವರು, ಈಗಾಗಲೇ ಅಬ್ಬರದಿಂದ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ‘ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ’ ಎಂದು ಹೇಳುತ್ತಿದ್ದಾರೆ. ಯುವಕರು ಸುನಿಲ್ ನಾಯಕರ ಬೆಂಬಲಕ್ಕಿದ್ದು ಅತ್ಯುತ್ತಮ ತಂಡ ಹೊಂದಿರುವ ಭರವಸೆಯಲ್ಲಿ ಅವರಿದ್ದಾರೆ.
ಬಿಜೆಪಿ ಶಾಸಕರಾಗಿದ್ದ ಡಾ.ಚಿತ್ತ ರಂಜನ್ ಹತ್ಯೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ 1996ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಿವಾನಂದ ನಾಯ್ಕ, ಅನುಕಂಪದ ಅಲೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 2004ರಲ್ಲಿ ಪುನಃ ಗೆದ್ದು ಶಾಸಕರಾಗಿದ್ದ ಅವರು ನಂತರ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾದರು.
ನಾಲ್ಕು ಬಾರಿ ಬಿಜೆಪಿಯಿಂದ, ಒಂದು ಬಾರಿ ಕೆಜೆಪಿಯಿಂದ ಅವರು ಸ್ಪರ್ಧಿಸಿದ್ದರು. ಎರಡು ಬಾರಿ ಬಿಜೆಪಿಯಿಂದ ಗೆಲುವು ಕಂಡಿದ್ದ ಅವರು, ಅನಾರೋಗ್ಯದಿಂದಾಗಿ ರಾಜಕೀಯದಿಂದ ದೂರ ಉಳಿದಿದ್ದರು. ಈಗ ಚೇತರಿಸಿಕೊಂಡಿರುವ ಅವರು, ‘ನಾನು ಈಗ ಆರೋಗ್ಯವಾಗಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದು ಹೇಳುತ್ತಾರೆ.
ಮೂಲತಃ ಕಾಂಗ್ರೆಸ್‌ನವರಾದ ಜೆ.ಡಿ.ನಾಯ್ಕ ಅವರು ಎರಡು ಬಾರಿ ಶಾಸಕರಾಗಿದ್ದವರು. ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ‘ಇನ್ನು ಯಾವುದೇ ಪಕ್ಷಕ್ಕೆ ಸೇರುವ ಪ್ರಮೇಯವೇ ಇಲ್ಲ. ನನ್ನ ರಾಜಕೀಯ ಜೀವನ ಬಿಜೆಪಿಯಲ್ಲೇ ಕೊನೆಯಾಗಲಿದೆ. ಟಿಕೆಟ್ ಆಸೆಗೋಸ್ಕರ ಈ ಪಕ್ಷಕ್ಕೆ ಸೇರಿಲ್ಲ. ನಾನು ಭಟ್ಕಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದು ನಿಜ. ಪಕ್ಷದ ವರಿಷ್ಠರು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಶ್ವಾಸವಿದೆ’ ಎನ್ನುತ್ತಾರೆ.
ಕಟ್ಟಾ ಹಿಂದುತ್ವವಾದಿಯಾದ ಗೋವಿಂದ ನಾಯ್ಕ, ಕಳೆದ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಪಕ್ಷದ ಸಾಂಪ್ರದಾಯಿಕ ಮತಗಳನ್ನು ಪಡೆದಿದ್ದ ಅವರು ಈ ಬಾರಿಯೂ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ.
‘ಕಾಸ್ಕಾರ್ಡ್’ ಬ್ಯಾಂಕ್ ಉಪಾಧ್ಯಕ್ಷ, ಗುತ್ತಿಗೆದಾರೂ ಆಗಿರುವ ಈಶ್ವರ ನಾಯ್ಕ, ಕಾಂಗ್ರೆಸ್‌ನಿಂದ ಬಿಜೆಪಿ ವಲಸೆ ಬಂದವರು. ಅವರೂ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ, ವಕೀಲರೂ ಆದ ರಾಜೇಶ ನಾಯ್ಕ ಸಹ ಹಿಂದುತ್ವವಾದಿ. ಕೇಂದ್ರ ಮಂತ್ರಿ ಅನಂತಕುಮಾರ್ ಆಪ್ತರಲ್ಲಿ ಒಬ್ಬರಾಗಿರುವ ಅವರು, ‘ಹೊಸಬರಿಗೆ ಅವಕಾಶ ನೀಡುವುದಾರೆ, ನನಗೆ ಟಿಕೆಟ್ ದೊರಕಬಹುದು’ ಎನ್ನುತ್ತಾರೆ.
ಇವರಲ್ಲದೇ ಬಿಜೆಪಿಯಿಂದ ಮಹಿಳಾ ಅಭ್ಯರ್ಥಿ ಕೋಟಾದಲ್ಲಿ ಮುಂಡಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಶಿವಾನಿ ಶಾಂತಾರಾಮ, ಕೃಷ್ಣನಾಯ್ಕ ಆಸರಕೇರಿ, ಹೊನ್ನಾವರ ವಿನೋದ ನಾಯ್ಕ ರಾಯಲಕೇರಿ ಅವರೂ ಉಮೇದುವಾರಿಕೆಗೆ ಆಸಕ್ತರಾಗಿದ್ದಾರೆ.‘ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರೂ ನಾವು ಸಾಮಾನ್ಯ ಕಾರ್ಯಕರ್ತರಾಗಿ ಕೆಲಸ ಮಾಡು ತ್ತೇವೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸು ತ್ತೇವೆ’ ಎಂಬುದು ಎಲ್ಲರ ಪ್ರತಿಕ್ರಿಯೆ