ಮೆಕ್ಸಿಕೋ: ವಿಶ್ವದ ಪುರಾತತ್ವ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆಯಾಗಿದ್ದು, ಸಮುದ್ರದಾಳದಲ್ಲಿ ಎರಡು ಗುಹೆಗಳನ್ನು ಸಂಪರ್ಕಿಸುವ ಬೃಹತ್ ಸುರಂಗ ಮಾರ್ಗ ಅಥವಾ ತೇಲುವ ಗುಹೆ ಮೆಕ್ಸಿಕೋದಲ್ಲಿ ಪತ್ತೆಯಾಗಿದೆ. ಈ ಕುರಿತಂತೆ ಅಂತರ್ರಾಷ್ಟ್ರೀಯ ಮಾಧ್ಯಮವೊಂದು ವಿಶೇಷ ವರದಿ ಪ್ರಕಟಿಸಿದೆ.
ಪುರಾತನ ಮಾಯಾ ನಾಗರಿಕತೆಯ ಕುರಿತಾಗಿ ಅಧ್ಯಯನಕ್ಕೆ ಈ ಸಂಶೋಧನೆ ಮಹತ್ವದ ದಾರಿಯನ್ನು ತೆರೆದಿದ್ದು, ವಿಶ್ವದಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.
ಗ್ರ್ಯಾನ್ ಆಕ್ಯೂಫಿರೋ ಮಾಯಾ ಎಂಬ ಸಂಸ್ಥೆ ಈ ಉತ್ಕನನ ನಡೆಸಿದ್ದು, ಸಮುದ್ರದ 347 ಕಿಲೋ ಮೀಟರ್ ಆಳದಲ್ಲಿ ಈ ಗುಹಾಂತರ ಪತ್ತೆಯಾಗಿದೆ. ಇದೇ ಸಂಸ್ಥೆ ಒಂದು ತಿಂಗಳ ಹಿಂದೆ ಸಮುದ್ರದ ಒಳಗೆ ನಿರ್ಮಾಣವಾಗಿರುವ ಚಾನಲ್‌ಗಳನ್ನು ಪತ್ತೆ ಮಾಡಿತ್ತು.
ಈಗ ಪತ್ತೆಯಾಗಿರುವ ಪ್ರದೇಶದಲ್ಲಿ 358 ಗುಹೆಗಳಿದ್ದು, ಈ ಭಾಗದಲ್ಲಿ ಅತ್ಯಂತ ಸ್ವಚ್ಛ ಹಾಗೂ ನಿರ್ಮಲವಾಗಿರುವ ನೀರು ಆವೃತ್ತವಾಗಿದೆ. ಅಂದಾಜು 1400 ಕಿಲೋ ಮೀಟರ್(870 ಮೈಲಿಗಳು)ಗಳಷ್ಟು ಉದ್ದದ ತೇಲುವ ಗುಹೆಗಳು ಇಲ್ಲಿ ಪತ್ತೆಯಾಗಿವೆ.