ಹಲವು ವಾರಗಳ ಕಠಿಣ ವ್ಯಾಯಾಮದ ಬಳಿಕವೂ ಬೊಜ್ಜು ಹಾಗೆ ಉಳಿದರೆ ಅದು ನಿಮ್ಮ ಫಿಟ್‌ನೆಸ್ ಉತ್ಸಾಹವನ್ನೇ ಕುಗ್ಗಿಸಿ ಬಿಡಬಹುದು. ಆದರೆ ಹೀಗೆ ಆಗುವುದು ನಾವು ವ್ಯಾಯಾಮದ ನಂತರ ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದ ಎಂದು ಹೇಳಬಹುದು. ಆ ತಪ್ಪುಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
ಸ್ಪೋರ್ಟ್ಸ್ ಡ್ರಿಂಕ್ಸ್
ಜಿಮ್‌ನಲ್ಲಿ ವ್ಯಾಯಾಮ ಮಾಡಿದ ಕೂಡಲೇ ಒಂದು ಲೋಟ ಸ್ಪೋರ್ಟ್ಸ್ ಡ್ರಿಂಕ್ಸ್ ಕುಡಿದರೆ ಅದು ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ನೀವು ತಿಳಿದುಕೊಂಡಿದ್ದರೆ ತಪ್ಪು. ಇದನ್ನು ನೀವು ಅತ್ಯಂತ ಕಠಿಣ ದೈಹಿಕ ವ್ಯಾಯಾಮದ ನಂತರ ಕುಡಿದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ. ಇಲ್ಲವಾದರೆ ಅದು ನಿಮ್ಮ ಕ್ಯಾಲರಿ ಪ್ರಮಾಣವನ್ನು ಹೆಚ್ಚಿಸುತ್ತದೆ. ನೀವು ಸುರಿಸಿದ ಬೆವರು ನಿಷ್ಪ್ರಯೋಜಕವಾಗುತ್ತದೆ. ಅದರ ಬದಲಿಗೆ ಎಳನೀರನ್ನು ಕುಡಿಯುವುದು ಉತ್ತಮ.
ಸ್ನ್ಯಾಕ್ಸ್ ತಿನ್ನದಿರುವುದು
ಜಿಮ್‌ನಲ್ಲಿ ವ್ಯಾಯಾಮದ ಬಳಿಕ ತುಂಬಾ ಜನ ಸ್ನ್ಯಾಕ್ಸ್ ತಿನ್ನುತ್ತಾರೆ. ಆದರೆ 30 ರಿಂದ 60 ನಿಮಿಷಗಳ ವ್ಯಾಯಾಮದ ಬಳಿಕ ನಿಮ್ಮ ದೇಹದ ಚಯಾಪಚಯ ಕ್ರಿಯೆ ಉತ್ಕೃಷ್ಟ ಮಟ್ಟದಲ್ಲಿರುತ್ತದೆ. ಈ ಸಂದರ್ಭದಲ್ಲಿ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್‌ಗಳಿರುವ ಆಹಾರಗಳನ್ನು ತಿನ್ನುವುದು ಒಳ್ಳೆಯದು.
ಶಿಸ್ತುಬದ್ಧ ವ್ಯಾಯಾಮ
ಒಂದು ದಿನ ಚೆನ್ನಾಗಿ ವರ್ಕೌಟ್ ಮಾಡಿ ಮಾರನೇ ದಿನ ಗೆಳೆಯರೊಂದಿಗೆ ಪಾರ್ಟಿಯಲ್ಲಿ ಚೆನ್ನಾಗಿ ಡ್ರಿಂಕ್ಸ್ ಮಾಡಿ, ಕುರುಕಲು ಹಾಗು ಎಣ್ಣೆ ಪದಾರ್ಥಗಳನ್ನು ಹೊಟ್ಟೆ ತುಂಬಾ ತಿಂದು ವರ್ಕೌಟ್ ಮಿಸ್ ಮಾಡಿಕೊಳ್ಳುವುದು ಸರಿಯಲ್ಲ. ಇತರರು ಅಸೂಯೆ ಪಡುವಂತಹ ದೇಹಸಿರಿ ನಿಮ್ಮದಾಗಬೇಕಾದರೆ ಶಿಸ್ತುಬದ್ಧ ವ್ಯಾಯಾಮ ಮಾಡಲೇಬೇಕು. ವಾರದಲ್ಲಿ ಕನಿಷ್ಠ 3 ರಿಂದ 5 ದಿನಗಳಾದರೂ ವ್ಯಾಯಾಮ ಮಾಡುವುದರ ಜೊತೆಗೆ ಆಹಾರ ಪದ್ಧತಿಯನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕು.