ಅಂಕೋಲಾ: ಕೊನೆಗೂ ಪೌರಸ್ ಫುಡ್ಸ ಕಂಪನಿಯ ವಿರುದ್ಧ ಹೋರಾಟ ನಡೆಸಿದ ಹೋರಾಟಗಾರರಿಗೆ ಜಯವಾಗುವುದರ ಮೂಲಕ ಸರಿಯಾದ ಮತ್ತು ಸಾಂಘಿಕ ಹೋರಾಟದಿಂದ ಜಯಗಳಿಸಬಹುದು ಎಂಬುದು ಆಂದ್ಲೆ ಹೋರಾಟದಿಂದ ಸಿದ್ಧವಾಗಿದೆ.
ಕಳೆದ ಮೂರು ವರ್ಷಗಳಿಂದ ಅಂಕೋಲಾ ತಾಲೂಕ ಆಂದ್ಲೆ ಬಳಿ ಇರುವ ಕಾರೆಬೈಲ್ ನಲ್ಲಿ ಪೌರಸ್ ಫುಡ್ಸ್ ಮೀನು ಸಂಸ್ಕರಣಾ ಘಟಕ ಎಂಬ ಬಹುದೊಡ್ಡ ಕಂಪನಿ ಪ್ರಾರಂಭವಾಗಿತ್ತು. ಅಲ್ಲಿ ಸುಮಾರು ಮೂರುನೂರರಿಂದ ನಾಲ್ಕುನೂರು ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಿಗೆ ಕನಿಷ್ಠ ವೇತನ ನೀಡದೇ , ರಜೆ ಸೌಲಭ್ಯ , ಬೋನಸ್ ಮತ್ತಿತರ ಸವಲತ್ತುಗಳನ್ನು ನೀಡದೇ ಸತಾಯಿಸುತ್ತಿದ್ದರು ಎಂದು ಕೆಲ ಕಾರ್ಮಿಕರು ನ್ಯಾಯವಾದಿ ಮತ್ತು ಜನಪರ ಹೋರಾಟಗಾರ ನಾಗರಾಜ ನಾಯಕರ ಮೂಲಕ ಹೋರಾಟಕ್ಕೆ ಇಳಿದಿದ್ದರು. ಕಂಪನಿಯ ನೀತಿಯನ್ನು ಪ್ರಶ್ನಿಸಿದ್ದಕ್ಕೆ ಅನೇಕ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಪ್ರಾರಂಭದಲ್ಲಿ ಹೋರಾಟ ನಡೆಸಿದಾಗ ಎರಡು ದಿನ ಬಿಟ್ಟು ಸೇವೆಗೆ ಸೇರಿಸಿ ಕೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿತ್ತು. ಮತ್ತೆ ಅದೇ ನೀತಿ ಮುಂದುವರೆಸಿದಾಗ , ಈ ಬಾರಿ ಹೋರಾಟದಲ್ಲಿ ವಿಫಲರಾಗಬಾರದು ಎಂದು ನಾಗರಾಜ ನಾಯಕ ರಣತಂತ್ರ ಹಣೆದರು.
ಒಬ್ಬ ಹೋರಾಟಗಾರ ಕಾಯಿದೆ ಜ್ಞಾನವನ್ನು ಹೊಂದಿದ್ದರೆ ಅಲ್ಲಿಗೆ ಹೋರಾಟದಲ್ಲಿ ಅರ್ಧ ಜಯ ಸಿಕ್ಕಿದಂತಯೇ. ಕಂಪನಿಯ ಆಡಳಿತ ಮಂಡಳಿಯನ್ನು ಕಾನೂನಿನ ಕಪಿಮುಷ್ಠಿಯಲ್ಲಿ ಸಿಲುಕಿಸುತ್ತಾ ಹೋದರು.
ಕೊನೆಗೂ ಬಗ್ಗಿದರು ಕಂಪನಿ ಬಂದಾದರೂ ಅಡ್ಡಿಯಿಲ್ಲ , ನೌಕರಿಯಿಂದ ತೆಗೆದು ಹಾಕಿದ ನೌಕರರನ್ನು ತೆಗೆದುಕೊಳ್ಳಲು ಸಾಧ್ಯ ಇಲ್ಲ ಎಂದಿದ್ದ ಕಂಪನಿ ನೌಕರರಷ್ಟೇ ಅಲ್ಲದೇ ಗ್ರಾಮಸ್ಥರ ಸಮಸ್ಯೆಗಳನ್ನು ಸಹ ಬಗೆಹರಿಸಲು ಒಪ್ಪಿದರು. ಕಂಪನಿಯ ಸಮೀಪ ಜನಗೋಡ ಎಂಬ ಚಿಕ್ಕನದಿ ಹರಿಯುತ್ತಿದ್ದು , ಅದಕ್ಕೆ ಕಂಪನಿಯ ಮಲಿನ ನೀರು ಬಂದು ಸೇರುತ್ತದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿತ್ತು. ನದಿ ನೀರನ್ನು ಮಲಿನ ಗೊಳಿಸುವುದಿಲ್ಲ ಎಂಬ ಭರವಸೆ ಸಿಕ್ಕಿದೆ. ಅಷ್ಟೇ ಅಲ್ಲದೇ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಹ ಒಪ್ಪಿದ್ದು ಒಂದು ಹೋರಾಟ ಸೌಹಾರ್ದಯುತವಾಗಿ ಮುಗಿದಿದೆ.
ನೌಕರರಿಗೆ ಸಂತೋಷ ಹದಿನೆಂಟು ತಾಸು ದುಡಿತ , ಪಿ.ಎಫ್ ಇಲ್ಲ , ಬೋನಸ್ ಕನಸಿನ ಮಾತು , ವಾರದ ರಜೆ ಇರಲೇ ಇಲ್ಲ ಮತ್ತು ಓಟಿ ಸಹ ಮರಿಚಿಕೆ ಯಾಗಿತ್ತು. ಈ ಹೋರಾಟದಿಂದ ಕಾರ್ಮಿಕ ಕಾಯ್ದೆಯಂತೆ ಸಿಗುವ ಎಲ್ಲಾ ಸೌಲತ್ತುಗಳು ನೌಕರರಿಗೆ ನೀಡಲು ಕಂಪನಿ ಒಪ್ಪಿದೆ. ಸಂಬಳ ಸಹ ಹೆಚ್ಚಲಿದೆ. ಎಷ್ಟೆಲ್ಲಾ ಸೌಲತ್ತುಗಳು ಕಾನೂನಿನಲ್ಲಿ ಇದೆಯೆಂದು ತಮಗೆ ತಿಳಿದೇ ಇರಲಿಲ್ಲ, ನ್ಯಾಯವಾದಿ ನಾಗರಾಜ ನಾಯಕರ ಕೃಪೆಯಿಂದ ನಮಗೆ ಇದು ಸಿಗಲು ಸಾಧ್ಯವಾಯಿತು ಎನ್ನುವುದು ಬಡ ಕಾರ್ಮಿಕರ ಅಭಿಪ್ರಾಯ.
ಊರವರ ಸ್ಪಂದನೆ
ಈ ಹೋರಾಟದಲ್ಲಿ ಭಾಗಿಯಾದ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀ ನಿತ್ಯಾನಂದ ಗಾಂವಕಾರ , ಗ್ರಾಮಪಂಚಾಯತ ಸದಸ್ಯರಾದ ಶ್ರೀ ಗಜಾನನ ಗಾಂವಕಾರ , ದೇವಾನಂದ ನಾಯಕ , ಶ್ರೀ ತಿಮ್ಮಣ್ಣ ಗೌಡ , ಹೊನ್ನಪ್ಪ ನಾಯಕ ಮೊಗಟಾ, ವಿನಾಯಕ ನಾಯಕ ಮೊಗಟಾ, ಅರುಣ ನಾಯಕ ಮೊಗಟಾ, ಸುರೇಶ ನಾಯಕ ಕಲ್ಲರಮನೆ, ವಿಶ್ವನಾಥ ದೊಡ್ಮನೆ, ಪ್ರಭಾಕರ ನಾಯಕ ಮೊರಳ್ಳಿ ,ಪ್ರದೀಪ ನಾಯಕ ಮೊಗಟಾ , ಶಾಂತಾ ಮೊಗಟಾ, ಭಾಸ್ಕರ ಗುನಗಾ, ತಾ.ಪಂ. ಸದಸ್ಯ ಬೀರ್ ಗೌಡ ಶಿರೂರ, ಬೀರಣ್ಣ ಮೊಗಟಾ, ಮಧುಕರ ಕಲ್ಲರಮನೆ ಇವರ ಸಹಕಾರವನ್ನು ನಿರಾಶ್ರಿತರು ಕೃತಜ್ಞತೆಯಿಂದ ನೆನೆಯುತ್ತಾರೆ. ವಿಶೇಷವಾಗಿ ಕಾಂಗ್ರೆಸ್ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ , ಕನ್ನಡಪರ ಹೋರಾಟಗಾರ ಅರುಣ ಹರ್ಕಡೆ ಇವರ ಬೆಂಬಲ ಸಹ ಮರೆಯಲಾರದ್ದು ಎಂದು ಹೇಳಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿ.ಪಿ.ಐ ಸಹ ಸೌಹಾರ್ದಯುತವಾಗಿ ವಿವಾದ ಬಗೆಹರಿಸುವಲ್ಲಿ ಶ್ರಮಿಸಿದ್ದಾರೆ.