ಕುಮಟಾ: ಇಲ್ಲಿಯ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶಿಕ್ಷಕ ವೃಂದ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಸ್ಸೆಸ್ಸೆಲ್ಸಿ ಓದುತ್ತಿರುವ ಮಕ್ಕಳಿಗೆ ಮೊದಲ ಪೂರ್ವಸಿದ್ಧತಾ ಪರೀಕ್ಷಾ ಫಲಿತಾಂಶ ವಿಶ್ಲೇಷಣೆ, ಮೊದಲ ಹತ್ತು ಶ್ರೇಯಾಂಕಿತರಿಗೆ ಪ್ರೋತ್ಸಾಹಕ ಬಹುಮಾನ , ಪಾಲಕ-ಬಾಲಕರೊಂದಿಗ ಸಂವಾದ ಮತ್ತು ಹೆತ್ತವರ ಪಾದಪೂಜೆಗೈದು ಅವರಿಂದ ಶುಭಾಶೀರ್ವಾದ ಪಡೆಯುವ ವಿಶಿಷ್ಠ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮೂಡಿಬಂದಿತು .
ತಮ್ಮ ತಮ್ಮ ಧಾರ್ಮಿಕ ಸಂಪ್ರದಾಯದಂತೆ ತಮ್ಮ ಮಕ್ಕಳಿಂದ ವಂದನೆ ಸ್ವೀಕರಿಸಿದ ಹೆತ್ತವರು ಆಶೀರ್ವದಿಸಿದ್ದು ಹೃದಯಂಗಮವಾಗಿತ್ತು. ಪ್ರಾರಂಭದಲ್ಲಿ ಗಣಿತ ಶಿಕ್ಷಕ ಅನಿಲ್ ರೊಡ್ರಗಿಸ್ ಪೂರ್ವಸಿದ್ಧತಾ ಪರೀಕ್ಷೆಯ ಫಲಿತಾಂಶ ವಿಶ್ಲೇಷಿಸಿದರು. ಪ್ರಥಮ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶಿಕ್ಷಕ ವಿಷ್ಣು ಭಟ್ಟ ಮಾತಾ ಪಿತೃರ ಪೂಜಿಸುವ ಮಹತ್ವದ ಕುರಿತು ವಿಶೇಷ ತಿಳುವಳಿಕೆ ನೀಡಿದರು. ತಂದೆತಾಯಿಗಳ ಪೂಜೆ ಹಾಗೂ ಅವರಿಂದ ಆಶೀರ್ವಾದ ಪಡೆಯುವುದು ಮಕ್ಕಳಲ್ಲಿ ರಕ್ತಗತವಾಗಿ ಬರಬೇಕೆಂದು ನುಡಿದರು.
ಪಾಲಕ ಪ್ರತಿನಿಧಿಗಳಾಗಿ ಗುರುನಾಥ ಶಾನಭಾಗ, ಮಾಲಿನಿ ಮಡಿವಾಳ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಪಾಲಕ-ಬಾಲಕ-ಶಿಕ್ಷಕರಲ್ಲಿ ಪರಸ್ಪರ ಸಾಮರಸ್ಯ ಬಾಂಧವ್ಯ ಒಡಮೂಡಿದಾಗ ಮಾತ್ರ ಕಲಿಕಾ ಪ್ರಕ್ರಿಯೆಗೆ ಚುರುಕುತನ ಮತ್ತು ಚೈತನ್ಯ ಸಿದ್ಧಿಸುತ್ತದೆ. ಕಲಿಕೆಯಲ್ಲಿ ತಡವರಿಸುವ ಮಕ್ಕಳಿಗೂ ಶಕ್ತಿ ದೊರಕುತ್ತದೆ. ಅದರಿಂದ ಪರೀಕ್ಷಾ ಭಯದಿಂದಲೂ ಮುಕ್ತಿಪಡೆದು, ಉಲ್ಲಾಸದಿಂದ ಪರೀಕ್ಷೆಯನ್ನು ಎದುರಿಸಬಹುದೆಂದು ಅಭಿಪ್ರಾಯಪಟ್ಟರು.
ಶಿಕ್ಷಕಿಯರಾದ ಕೆ. ಅನ್ನಪೂರ್ಣಾ, ಸ್ವಾತಿ ನಾಯ್ಕ ಹಾಗೂ ಅಂಕಿತಾ ನಾಯ್ಕ ಪಾದಪೂಜಾ ವಿಧಾನಗಳನ್ನು ಪ್ರಸ್ತುತಪಡಿಸಿದರು. ಶಿಕ್ಷಕ ಪ್ರದೀಪ ನಾಯ್ಕ, ಪ್ರಶಾಂತ ಗಾವಡಿ ನಿರ್ವಹಿಸಿದರು. ಶಿಕ್ಷಕ ಕಿರಣ ಪ್ರಭು ಕೊನೆಯಲ್ಲಿ ವಂದಿಸಿದರು.