ಸದಾ ನಗುಮೊಗ, ಆತ್ಮೀಯತೆ, ನಿರಹಂಕಾರದ ಸರಳ ಗುಣಗಳಿಂದಲೇ ಜನ ಮನ ಗೆದ್ದಿರುವ ಎಂ.ಜಿ ಭಟ್ಟ ಕುಮಟಾ ರವರು ಸುತ್ತ ಮುತ್ತಲಿನ ಜನತೆಗೆ ಚಿರಪರಿಚಿತರು , ಅಷ್ಟೇ ಅಲ್ಲ..ಎಲ್ಲರಿಗೂ ಆತ್ಮೀಯರೂ ಕೂಡ.
ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಕಾಯಕ ಯೋಗಿಯಂತೆ ಮುನ್ನಡೆದ ಶ್ರೀ ಎಂ.ಜಿ ಭಟ್ಟರವರು , ಕುಮಟಾ ಹಾಗೂ ಸುತ್ತಮುತ್ತಲ ಬಹುತೇಕ ಯುವಕರಿಗೆ ಮಾರ್ಗದರ್ಶಕರು ಎಂದರೆ ತಪ್ಪಾಗಲಾರದು. M Sc, B Ed ,M A ಪದವೀಧರರಾಗಿ ಶಿಕ್ಷಣ ರಂಗದಲ್ಲಿ ‘ಅತ್ಯುತ್ತಮ ಉಪನ್ಯಾಸಕರು’ ಎಂದೇ ಗುರುತಿಸಿಕೊಂಡವರು. ಪ್ರಸ್ತುತ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಶಿಕ್ಷಣದ ಕ್ಷೇತ್ರವನ್ನು ಬಲ್ಲವರು ಇವರು. ನಿರಂತರ ಎರಡು ದಶಕಗಳ ಶಿಕ್ಷಣ ಸೇವೆಯೇ ಇವರಿಗೆ ಬಲ ಎನ್ನುತ್ತಾರೆ ಅಂತ್ರವಳ್ಳಿಯ ವಿನಾಯಕ ನಾಯ್ಕ.
ಪ್ರಗತಿ ಟ್ಯುಟೋರಿಯಲ್ ಸ್ಥಾಪಿಸಿ ತಮ್ಮ ಪತ್ನಿಯ ಬೆಂಬಲದ ಜೊತೆ ಜೊತೆಗೆ ಈವರೆಗೆ 1200 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಬಗ್ಗೆ ತಮ್ಮ ಸಂತಸವನ್ನು ಅವರು “ಸತ್ವಾಧಾರ ನ್ಯೂಸ್” ಜೊತೆಗೆ ಹಂಚಿಕೊಂಡರು.
ಜನರ ನೋವಿಗೆ ಸ್ಪಂದಿಸುವ ಯೋಜನೆಯಿಂದ ಹಾಗೂ ಜನತೆಗಾಗುವ ಅನ್ಯಾಯಗಳನ್ನು ಪ್ರತಿಭಟಿಸಲೋಸುಗವೇ ತಮ್ಮ ಬೆಂಬಲಿಗರೊಂದಿಗೆ ಸ್ಥಾಪಿಸಿದ ‘ಜನಪರ ಹೋರಾಟ ವೇದಿಕೆ’ ಈಗ ಉತ್ತರಕನ್ನಡದಾದ್ಯಂತ ಸಹಸ್ರಾರು ಸದಸ್ಯರ ಜೊತೆಗೆ ಮುನ್ನುಗ್ಗುತ್ತಿರುವುದು ಅವರ ನಾಯಕತ್ವ ಹಾಗೂ ಸಾಮಾಜಿಕ ಕಳಕಳಿಯ ಪ್ರತಿಬಿಂಬ ಎನ್ನುತ್ತಾರೆ ಶ್ರೀಧರ ಹರಿಕಾಂತ.
ತುರ್ತಾಗಿ ರಕ್ತದ ಅತ್ಯವಶ್ಯಕತೆಯುಳ್ಳವರಿಗಾಗಿ ಇದುವರೆಗೆ ಇಪ್ಪತ್ತಕ್ಕೂ ಹೆಚ್ಚು ಬಾರಿ ತಮ್ಮ ರಕ್ತ ದಾನ ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.ಜನತೆಗೆ ಅನ್ಯಾಯವಾದಾಗಿನ ಯಾಣ ಬಸ್ ವ್ಯವಸ್ಥೆ, ಕುಮಟಾ ಜನತೆಗೆ ಅಗತ್ಯವಾಗಿದ್ದ ಕಾಮಗಾರಿಗಳ ಬಗ್ಗೆ ಮಾಡಿಕೊಂಡ ಮನವಿಗಳು ಜನಪರ ಹೋರಾಟ ವೇದಿಕೆಯಿಂದ ಜನತೆಗೆ ಅನುಕೂಲ ಒದಗಿಸಿದೆ ಎಂಬುದು ಸರ್ವ ಸಮ್ಮತ . ಕಳೆದ ಹತ್ತು ವರ್ಷಗಳಿಂದ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಮಾಜಿಕ ಅನ್ಯಾಯದ ವಿರುದ್ಧ ಬೀದಿಗಿಳಿದು ನಡೆಸಿದ ಹೋರಾಟ,ಅನೇಕ ಅನಾರೋಗ್ಯ ಪೀಡಿತರಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಉಚಿತ ತರಗತಿ ಇವೆಲ್ಲ ಶ್ರೀಯುತರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.
ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಎಂ.ಜಿ ಭಟ್ಟರವರು ಕನ್ನಡದ ಬಗ್ಗೆ ಜನ ಜಾಗ್ರತಿ ಹಾಗೂ ಭಾಷೆಯ ಉಳಿವು ಬೆಳೆವಿಗೆ ಪ್ರಯತ್ನಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಸಮೀತಿಯನ್ನು ಹುಟ್ಟುಹಾಕಿ ಅದರ ಅಧ್ಯಕ್ಷರಾಗಿ ನಿರಂತರ ಕನ್ನಡ ಕಾಯಕಕ್ಕೆ ಮುಂದಾದವರು.ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಕೀರ್ತಿ ಹಾಗೂ ಯಶಸ್ವಿಯಾಗಿ ಅದ್ಧೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಸಿದ ಕೀರ್ತಿ ಎಂ.ಜಿ ಭಟ್ಟರವರಿಗೆ ಸಲ್ಲುತ್ತದೆ.
ಕಳೆದ ನಾಲ್ಕು ವರ್ಷಗಳಿಂದ ABVP ಅಧ್ಯಕ್ಷರಾಗಿ ಕಾರ್ಯ ಮಾಡುತ್ತಾ ಬಂದಿರುವ ಇವರು ಸಾಮಾಜಿಕ ಕಳಕಳಿಯ ಎಲ್ಲ ಸಂಘ ಸಂಸ್ಥೆಗಳ ಜೊತೆಗೆ ನಿಕಟ ಒಡನಾಟ ಹೊಂದಿದವರು.
ಪ್ರಸ್ತುತ ಭಾರತೀಯ ಜನತಾ ಪಕ್ಷದ ಶಿಕ್ಷಣ ಪ್ರಕೋಷ್ಠದ ಪ್ರಮುಖರಾಗಿ ಯೂ ಸೇವೆ ಸಲ್ಲಿಸುತ್ತಿದ್ದು ಶಿಕ್ಷಣ,ದೂರದರ್ಶಿತ್ವದ ನಡೆ, ಸಮಾಜಮುಖಿ ಚಿಂತನೆ ಹಾಗೂ ಸಮರ್ಥ ನಾಯಕತ್ವದಿಂದಲೇ ಮನೆಮಾತಾದ ಶ್ರೀ ಎಂ.ಜಿ ಭಟ್ಟರವರು ಸಾವಿರಾರು ಅಭಿಮಾನಿಗಳ ನೆಚ್ಚಿನ ವ್ಯಕ್ತಿತ್ವ ಹೊಂದಿದವರು. ಹೊಸ ಪ್ರಗತಿಯ ಕನಸು ಹೊತ್ತ ಯುವ ಮುಖಂಡರಲ್ಲಿ ಶ್ರೀ ಎಂ.ಜಿ ಭಟ್ಟರವರೂ ಒಬ್ಬರೆಂಬುದು ಸಾರ್ವತ್ರಿಕ ಅಭಿಪ್ರಾಯ.
ವರದಿ :ಸತ್ವಾಧಾರ ನ್ಯೂಸ್.
ಸಹಕಾರ : ಜಯದೇವ ಬಳಗಂಡಿ.