ಭಟ್ಕಳ: ತಾಲೂಕಿನ ಬೆಳಕೆ ಗ್ರಾ.ಪಂ. ವ್ಯಾಪ್ತಿಯ ನೂಜ ಬಳಿಯಲ್ಲಿ ಪರವಾನಿಗೆ ಇಲ್ಲದೇ ನಡೆಸುತ್ತಿದ್ದ ಸೀಸ ತಯಾರಿಕಾ ಕಾರ್ಖಾನೆಯನ್ನು ಇಲ್ಲಿನ ತಹಸೀಲ್ದಾರ್ ವಿ.ಎನ್.ಬಾಡಕರ್ ಹಾಗೂ ಗ್ರಾಮೀಣ ಠಾಣಾ ಪೋಲೀಸರ ನೇತೃತ್ವದಲ್ಲಿ ಜಪ್ತಿ ಮಾಡಿ ಕಾರ್ಖಾನೆಯ ಕೆಲಸಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಜಮೀನೊಂದರಲ್ಲಿ ಪರವಾನಿಗೆ ಇಲ್ಲದೇ ಸೀಸ ಕಾರ್ಖಾನೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಗುರುವಾರದಂದು ಬೆಳಿಗ್ಗೆ ತಹಸೀಲ್ದಾರ ನೇತೃತ್ವದಲ್ಲಿ ಅನಧೀಕೃತವಾಗಿ ನಡೆಸುತ್ತಿದ್ದ ಸೀಸ ತಯಾರಿಕಾ ಕಾರ್ಖಾನೆಯ ಮೇಲೆ ದಾಳಿ ದಿಢೀರ ದಾಳಿ ಮಾಡಲಾಗಿತ್ತು. ಈ ಭಾಗದ ಸಾರ್ವಜನಿಕರ ದೂರಿನ್ವಯ ಇಲ್ಲಿನ ಸೀಸ ತಯಾರಿಕಾ ಕಾರ್ಖಾನೆಯ ಮೇಲೆ ದಾಳಿ ಮಾಡಿದ್ದು, ತಯಾರಿಕೆಯ ಬಳಿಕದ ತ್ಯಾಜ್ಯ ಮತ್ತೆ ವಿಷಕಾರಿ ಅನಿಲದಿಂದ ಈ ಭಾಗದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಲಿತ್ತು. ಕಾರ್ಯಾಚರಣೆಯಲ್ಲಿ ಕಾರ್ಖಾನೆಯಲ್ಲಿನ ಜನರೇಟರ್, ಎರಡು ಮೋಟಾರ್, 25 ಲೆಡ್ ಕಟೇನರ್, 2 ಬ್ರೈವರ್, ಚೈನ್ ರೈವ್ ಸೇರಿದಂತೆ ಇನ್ನಿತರ ಸಲಕರಣೆಗಳನ್ನು ಜಪ್ತಿ ಮಾಡಲಾಯಿತು.
ಕಾರ್ಖಾನೆಯೂ ಕಳೆದ 3 ತಿಂಗಳಿನಿಂದ ನಡೆಸಿಕೊಂಡು ಬರುತ್ತಲಿದ್ದು, ಸಂಬಂಧಪಟ್ಟ ಇಲಾಖೆಯಿಂದ ಬಂದ್ ಮಾಡಬೇಕೆಂದು ಈ ಹಿಂದೆ ನೋಟೀಸ್ ಸಹ ಕಳುಹಿಸಲಾಗಿತ್ತು. ಆದರೆ ನೋಟಿಸ್‍ಗೆ ಯಾವುದೇ ಬೆಲೆ ನೀಡದೇ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಈ ಬಗ್ಗೆ ಸ್ಥಳಿಯರು ಮತ್ತೆ ತಹಸೀಲ್ದಾರಿಗೆ ದೂರು ನೀಡಿದ್ದರ ಕಾರಣ ಈ ಹಿಂದೆ ಸ್ಥಳಕ್ಕೆ ತೆರಳಿ ಕಾರ್ಖಾನೆಯ ಮಾಲೀಕರಿಗೆ ಎಚ್ಚರಿಕೆಯನ್ನು ನೀಡಿ ವಾಪಸ್ಸಾಗಿದ್ದರು. ಕಾರ್ಖಾನೆಗೆ ಅಳವಡಿಸಲಾದ ವಿದ್ಯುತ್ ಸಂಪಕ್ ಕಡಿತಗೊಳಿಸಿ ತೆರಳಿದ್ದು, ಬಳಿಕ ರಾತ್ರಿ ವೇಳೆ ಅನಧೀಕೃತವಾಗಿ ಜನರೇಟರ್ ಸಹಾಯದಿಂದ ಕಾರ್ಖಾನೆಯಲ್ಲಿ ಕೆಲಸ ಮುಂದುವರೆಸುತ್ತಿದ್ದರು.
ಕಾರ್ಯಾಚರಣೆಯ ವೇಳೆ ಬೆಳಕೆ ಗ್ರಾ.ಪಂ. ಅಧ್ಯಕ್ಷ ರಮೇಶ ನಾಯ್ಕ ತಹಸೀಲ್ದಾರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕಾರ್ಯಾಚರಣೆ ಮಾಡದಂತೆ ಪಟ್ಟು ಹಿಡಿದರು. ಪೋಲೀಶರ ಮಧ್ಯಸ್ಥಿಕೆಯಲ್ಲಿ ಕಾರ್ಯಾಚರಣೆ ಮುಂದುವರೆಯಿತು.
ಕಂದಾಯ ನಿರೀಕ್ಷಕ ರಾಜು ನಾಯ್ಕ, ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ ಗಾಂವಕರ್, ಸೂಸಗಡಿ ಗ್ರಾಮ ಲೆಕ್ಕಾಧಿಕಾರಿ ಕೆ.ಶಂಭು, ಹೆಬಳೆ ಗ್ರಾಮ ಲೆಕ್ಕಾಧಿಕಾರಿ ಅಣ್ಣಯ್ಯ, ಮುಠ್ಠಳ್ಳಿ ಗ್ರಾಮ ಲೆಕ್ಕಾಧಿಕಾರಿ ಸಲ್ಮಾನ್ ಖಾನ್, ಗ್ರಾಮ ಸಹಾಯಕರು, ಗ್ರಾಮೀಣ ಠಾಣಾ ಪಿಎಸೈ ರವಿ ಜಿ.ಎ., ಎಸೈ ನವೀನ್ ಬೋರಕರ್, ಮಹಿಳಾ ಸಿಬ್ಬಂದಿ ಇದ್ದರು.
ಲಘು, ಭಾರಿ ವಾಹನಕ್ಕೆ ಬಳಸುವ ಕೆಟ್ಟಿರುವ ಬ್ಯಾಟರಿಯನ್ನು ತೆಗೆದು ಬ್ಯಾಟರಿಯನ್ನು ಬೆಂಕಿಯಲ್ಲಿ ಕರಗಿಸಿ ಸೀಸವನ್ನು ತೆಗೆಯಲಾಗುತ್ತಿತ್ತು. ಇದರಿಂದ ವಿಷಾನಿಲ ಬರುತ್ತಿದ್ದು, ಜನರ ಉಸಿರಾಟಕ್ಕೆ ತೊಂದರೆಯ ಜೊತೆಗೆ ಅಪಾಯಕಾರಿ ಕಾರ್ಖಾನೆಯಾಗಿತ್ತು.