ಸಿದ್ದಾಪುರ: ‘ದೇವರಾಜ ಅರಸು ಅವರ ಅಧಿಕಾರ ಹೋದ ನಂತರ, ರಾಜಕೀಯ ವಾಸನೆ ಇರುವ ಎಲ್ಲರೂ ಅವರನ್ನು ಮರೆತರು’ ಎಂದು ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ವಿಷಾದ ವ್ಯಕ್ತಪಡಿಸಿದರು.

ದೇವರಾಜ ಅರಸು ಹಿಂದುಳಿದ, ರೈತ, ಕೃಷಿ ಕಾರ್ಮಿಕರ ಬಳಗದ ಆಶ್ರಯದಲ್ಲಿ ತಾಲ್ಲೂಕಿನ ತರಳಿಮಠದ ಆವರಣದಲ್ಲಿ ದೇವರಾಜ ಅರಸು ಅವರ ಆಳೆತ್ತರದ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಭಾಷಣ ಮಾಡುವಾಗ ಎಲ್ಲರೂ ಅರಸು ಅವರ ಹೆಸರು ಹೇಳುತ್ತಾರೆ. ಆದರೆ ಈ ಜನ ಅರಸು ಹೆಸರು ಶಾಶ್ವತವಾಗಿ ಇರುವಂತಾಗಲು ಮೂರ್ತಿ ಸ್ಥಾಪನೆ ಮಾಡುತ್ತಿದ್ದಾರೆ. ಅದು ಇಲ್ಲಿನ ಜನರ ಹೃದಯದೊಳಗಿನ ಕೃತಜ್ಞತಾ ಭಾವವನ್ನು ತೋರಿಸುತ್ತದೆ. ಆದ್ದರಿಂದ ನಿಮಗೆ ದೊಡ್ಡ ನಮಸ್ಕಾರ ಹೇಳುತ್ತೇನೆ’ ಎಂದರು.

RELATED ARTICLES  ಅಬ್ಭಾ!!! ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ದಂಡ ಹಾಕಿ ಸಂಗ್ರಹವಾದ ಹಣ ಎಷ್ಟು ಗೊತ್ತಾ?

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ‘ಧ್ವನಿ ಇಲ್ಲದವರಿಗೆ ಧ್ವನಿ ನೀಡಿದಂತಹ, ಶೋಷಿತರಿಗೆ ಶಕ್ತಿ ತುಂಬಿದ ಅರಸು ಅವರನ್ನು ನಾವು ಮರೆಯುತ್ತಿದ್ದೇವೆ. ರೈತಾಪಿ ಜನ ಅವರನ್ನು ಮರೆಯುವುದರಲ್ಲಿ ಆಶ್ಚರ್ಯ ಇಲ್ಲ, ಜೀವನದ ನೋವು–ನಲಿವು, ಜಂಜಡದಲ್ಲಿ ಅವರು ಮರೆಯಬಹುದು. ಆದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲಿ ಪುತ್ಥಳಿ ನಿರ್ಮಿಸುವ ಕೆಲಸ ಮಾಡಬೇಕಾಗಿತ್ತು. ಅದನ್ನು ಮಾಡಿಲ್ಲ. ಅದು ಈ ರಾಜ್ಯದ ದುರಂತ’ ಎಂದರು.

RELATED ARTICLES  ದಿ. ಡಾ.ಆರ್.ಎನ್.ಶೆಟ್ಟಿ ಪ್ರತಿಮೆ ಅನಾವರಣ

ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ, ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ನಿಗಮದ ಅಧ್ಯಕ್ಷ ಗೋ.ತಿಪ್ಪೇಶ, ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮಂಜುನಾಥ ಗೌಡ, ಕಾಂಗ್ರೆಸ್ ಧುರೀಣ ದಯಾನಂದ, ಗಣ್ಯರಾದ ನಾರಾಯಣ ರೆಡ್ಡಿ, ಮಂಜುನಾಥ ನಾಯ್ಕ ಹರಗಿ ಉಪಸ್ಥಿತರಿದ್ದರು.