ಸಿದ್ದಾಪುರ: ‘ರೈತರು ಆರ್ಥಿಕವಾಗಿ ಹೆಚ್ಚು ಸದೃಢರಾಗಲು ಹೈನುಗಾರಿಕೆ ಅವಶ್ಯಕ’ ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಹೇಳಿದರು. ತಾಲ್ಲೂಕಿನ ವಾಟಗಾರಿನ ಹಾಲು ಉತ್ಪಾದಕರ ಸಹಕಾರಿ ಸಂಘ, ಇಟಗಿ ಗ್ರಾಮ ಪಂಚಾಯ್ತಿ, ಪಶುಸಂಗೋಪನಾ ಇಲಾಖೆ, ಧಾರವಾಡ ಹಾಲು ಒಕ್ಕೂಟದ ಆಶ್ರಯದಲ್ಲಿ ವಾಟಗಾರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ದೇಸಿ ಜಾನುವಾರುಗಳ ಪ್ರದರ್ಶನ ಮತ್ತು ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು, ಕಡಿಮೆ ಖರ್ಚಿನಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡಬೇಕು’ ಎಂದರು. ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಎಲ್.ಕೆ. ಹೆಗಡೆ ಬಿದ್ರಕಾನ, ‘ದೇಸಿ ತಳಿಯ ಹಸುಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವುದರಿಂದ ಮಿಶ್ರತಳಿ ಹಸುಗಳನ್ನು ಸಾಕುವ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿಸಬೇಕು.
ಧಾರವಾಡ ಹಾಲು ಒಕ್ಕೂಟ ಹಾಲನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿದೆ. ಇದರಿಂದ ವೆಚ್ಚ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಹಾಲನ್ನೇ ಮಾರಾಟ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದರು.
ಇಟಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಾ ಲೋಕೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಿರಿಜಾ ಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಸುರೇಂದ್ರ ಗೌಡ, ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಹಾರ್ಸಿಕಟ್ಟಾ ಹಾಲು ಉತ್ಪಾದಕರ ಕಾರ್ಯದರ್ಶಿ ರಮೇಶ ಹೆಗಡೆ, ಪಶು ವೈದ್ಯಾಧಿಕಾರಿ ಡಾ.ಶ್ರೇಯಸ್, ಬಿಳಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ದಯಾನಂದ ಚಿನಿವಾರ, ಧಾರವಾಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ದಯಾನಂದ ಇದ್ದರು.
ಪ್ರಗತಿಪರ ಕೃಷಿಕರಾದ ವಾಸುದೇವ ಟಿ. ನಾಯ್ಕ, ದೇವಿದಾಸ ಎನ್. ನಾಯ್ಕ, ದೇವೇಂದ್ರ ಕೆ. ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಿಗೆ ಬೋನಸ್ ವಿತರಿಸಲಾಯಿತು.