ಹೊಸನಗರ: ಗೋವುಗಳಿಲ್ಲದ ಗೋಪಾಲರಿಗೆ ಶೋಭೆ ಇಲ್ಲ, ಗೋಪಾಲನಿಲ್ಲದೆ ಗೋವುಗಳಿಗೂ ಶೋಭೆ ಇಲ್ಲ ಅಂತಯೇ ಗೋವುಗಳಿಲ್ಲದೆ ಮನೆಗೂ ಮಠಕ್ಕೂ ಶೋಭೆ ಇಲ್ಲ, ಮಠವಿಲ್ಲದೆ ಸಮಾಜಕ್ಕೆ ಶೋಭೆ ಇಲ್ಲ ಹೀಗೆ ಗೋವು ಎಲ್ಲ ಕಡೆಗಳಲ್ಲಿಯೂ ಶೋಭಿತ ಅಗತ್ಯವಿರುವ ತಾಯಿ ಹಾಗಾಗಿಯೇ ನಾವು ನೀವು ಗೋವು ಎನ್ನುವ ಪರಿಧಿಯಲ್ಲಿರಬೇಕು ಅಲ್ಲಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ವಾಸವಾಗಿರುತ್ತಾನೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಹೊಸನಗರ ಶ್ರೀರಾಮಚಂದ್ರಾಪುರಮಠದಲ್ಲಿರುವ ಮಹಾನಂದಿ ಗೋಲೋಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಾಲಯವನ್ನು ಭಾನುವಾರ ಲೋಕಾರ್ಪಣೆಗೊಳಿಸಿ, ಕೃಷ್ಣಸಿಲೆಯ ನೂತನ ಗೋವರ್ಧನಗಿರಿ ಗೋಪಾಲಕೃಷ್ಣದೇವರನ್ನು ಪ್ರತಿಷ್ಟಾಪಿಸಿದ ನಂತರ ನಡೆದ ಧರ್ಮಸಭೆಯ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಮ್ಮ ಬದುಕಿನ ಭದ್ರ ಭವಿಷ್ಯದ ರಥಕ್ಕೆ ಉತ್ತಮ ಸಾರಥ್ಯಬೇಕು. ಅಂದು ದ್ವಾಪರಯುಗದಲ್ಲಿ ಸಾರಥಿ ತನದಿಂದ ವಿಜಯಿಯಾಗಿಸಿದ ಕೃಷ್ಣನ ಆಗಮನ ಎಲ್ಲೆ ಆಗುವುದೋ ಅಲ್ಲಿ ಸೋಲಿಲ್ಲ ಎನ್ನುವುದನ್ನು ನಿರೂಪಿಸಿದ ಎಂದ ಅವರು, ವಿಶೇಷ ಎಂದರೆ ಕೃಷ್ಣನ ಆಗಮನ ಎಲ್ಲಿದೆಯೋ ಅಲ್ಲೆಲ್ಲ ಗೋವೂ ಕೂಡ ಇದೆ ಎನ್ನುವುದು ಎಂದರು. ಕೃಷ್ಣ ಸಾರಥ್ಯದಲ್ಲಿ ಸೋಲಿಲ್ಲ ಎನ್ನುವ ಸತ್ಯವರಿತವರು ಗೋವನ್ನು ಮಾತೆಯಾಗಿ ಸ್ವೀಕರಿಸಬೇಕಿದೆ ಎಂದರು.

RELATED ARTICLES  ಭಟ್ಕಳ, ಶಿರಸಿಯಲ್ಲಿ ನಾಳೆ ಎಲ್ಲೆಲ್ಲಿ ಕೊರೋನಾ ಲಸಿಕೆ ಲಭ್ಯ

ಮನುಷ್ಯನ ಬದುಕಿನಲ್ಲಿ ಅಪೇಕ್ಷೆಪಡಬೇಕಿರುವ ಅಂಶಗಳು ಕೇವಲ ಎರಡು. ಅದು ಮಾತ್ಯಾವುದೂ ಅಲ್ಲ ಅನಿಷ್ಟಗಳ ನಿವೃತ್ತಿಯಾಗಬೇಕು ಮತ್ತು ಇಷ್ಟ ಪ್ರಾಪ್ತಿಯಾಗಬೇಕು ಎನ್ನುವುದಷ್ಟೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟ ಇರುತ್ತದೆ ಅದು ಇರಬೇಕು ಕೂಡ. ಹಾಗಿದ್ದಾಗ ಮಾತ್ರ ನಾವು ಗಟ್ಟಿಯಾಗುವುದಕ್ಕೆ ಸಾಧ್ಯವಾಗಲಿದೆ. ಕಷ್ಟ ಬಂದಾಗ ಗಟ್ಟಿಯಾಗುವ ಹಿಂದೆ ಭಗವಂತನ ಸ್ಮರಣೆಬೇಕು. ಅದರಲ್ಲಿಯೂ ಕೃಷ್ಣನ ಸ್ಮರಣೆಯಾದರೆ ಕಷ್ಟ ನಿವಾರಣೆಯ ಸುಖ ಪ್ರಾಪ್ತಿಯಾಗಲಿದೆ ಎಂದರು.

ಶ್ರೀರಾಮಚಂದ್ರಾಪುರಮಠದಿಂದ ಕೆಲವೇ ದಿನಗಳಲ್ಲಿ ಗೋಸ್ವರ್ಗ ಎನ್ನುವ ಕಲ್ಪನೆಯಲ್ಲಿ ಗೋಶಾಲೆಗಳ ನಿರ್ಮಾಣವಾಗುವುದಕ್ಕಿದೆ. ಇಲ್ಲಿ ಗೋವುಗಳನ್ನು ಕಟ್ಟುವುದಿಲ್ಲ, ಅವುಗಳ ಇಷ್ಟದಂತೆ ಬದುಕುವುದಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಲಾಗುವುದು. ಈಗಾಗಲೆ ರಾಜ್ಯದ ಎರಡು ಕಡೆ ಗೋಸ್ವರ್ಗ ಸ್ಥಾಪನೆಗೆ ಕ್ಷಣಗಣನೆ ನಡೆಯುತ್ತಿದೆ. ನೆರಳು ಬೇಕೆಂದಾಗ ನೆರಳು, ಬಿಸಿಲುಬೇಕೆಂದಾಗ ಬಿಸಿಲು, ಶುದ್ದ ಗಾಳಿ ಹೀಗೆ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡ ಗೋಸ್ವರ್ಗ ಹೊಂದಿರಲಿದೆ ಎಂದರು.

ನಾಡಿನ ವಿವಿಧ ಭಾಗಗಳೀಂದ ಆಗಮಿಸಿದ್ದ ಗೋಪ್ರೇಮಿಗಳು 108 ಗೋಧಾನ ಹಾಗೂ ಗೋತುಲಾಬಾರ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಧನ್ಯತೆ ಅನುಭವಿಸಿದರು.
ವೇದಿಕೆಯಲ್ಲಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತರಾದ ಡಾ.ಜಿ. ಭೀಮೇಶ್ವರ ಜೋಯಿಸ್, ಶೌರಿರಾಜನ್ ನಾರಾಯಣನ್ ಐಯಂಗಾರ್, ಬಿ.ರವಿ. ಯುಎಸ್‌ಎ ಮಕ್ಕಳ ತಜ್ಞೆ ಅಲಕಾಜೆ, ಕೆ.ಜಿ. ಭಟ್, ಮಾಜಿ ಸಚಿವ ಹರತಾಳು ಹಾಲಪ್ಪ, ಆರ್.ಎಂ. ಮಂಜುನಾಥ್‌ಗೌಡ, ಜಿಪಂ ಸದಸ್ಯ ಕಲಗೋಡು ರತ್ನಾಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಡಾ. ಸೀತಾರಾಮ ಪ್ರಸಾದ್, ಕೃಷ್ಣಪ್ರಸಾದ್ ಮತ್ತಿತರರು ಇದ್ದರು. ರಮೇಶ್ ಹೆಗಡೆ ಗುಂಡೂಮನೆ ನಿರೂಪಿಸಿದರು.

RELATED ARTICLES  ಶ್ರೀಭಾರತೀ ವಿದ್ಯಾಲಯದಲ್ಲಿ ಮಾತಾ ಪಿತೃಪೂಜೆ ~ಜನ್ಮದಾತರಿಗೆ ಪೂಜೆ ಸಲ್ಲಿಸಿದ ಮಕ್ಕಳು

ಪ್ರಾಚೀನಕಾಲದಿಂದಲೂ ಶ್ರೀರಾಮಚಂದ್ರಾಪುರಮಠದಲ್ಲಿ ಪೂಜೆಗೊಳ್ಳುತ್ತಿರುವ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರ ನವೀಕೃತ ದೇವಾಲಯವು, ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಗೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀಕಾರ ಹಾಕಿದ ಸ್ಥಳದಲ್ಲಿ ನಿರ್ಮಾಣವಾಗಿದ್ದು, ನಾಲ್ಕು ದಿಕ್ಕುಗಳಲ್ಲಿ ಗೋಶಾಲೆಯಿದ್ದು ಮಧ್ಯದಲ್ಲಿ ಗೋಪಾಲಕೃಷ್ಣ ದೇವರಿರುವುದು ವಿಶೇಷವಾಗಿದೆ. ಆಂದೋಲನಗಳ ಮೂಲಕ ರಾಘವೇಶ್ವರ ಶ್ರೀಗಳು ಗೋವುಗಳನ್ನು ರಕ್ಷಿಸಲು ಸಂಕಲ್ಪಿಸಿದ ಸ್ಥಳದಲ್ಲಿ ದೇವಾಲಯ ನಿರ್ಮಾಣವಾಗಿರುವುದು, ದ್ವಾಪರದಲ್ಲಿ ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿ ಗೋವುಗಳನ್ನು ಸಂರಕ್ಷಿಸಿದ್ದನ್ನು ನೆನಪಿಸುವಂತಿದೆ.