ಬಿಸಿಲ ಬೇಗೆ ತಣಿಸಿಕೊಳ್ಳೋಕೆ ತಂಪುಪಾನೀಯಗಳ ಮೊರೆಹೋಗ್ತೀವಿ. ಆದರೆ ಪಾನೀಯ ಸೇವಿಸಿದ ನಂತರ ಬಾಟಲ್ ಕಸದ ತೊಟ್ಟಿಗೆಸೆದು ತಪ್ಪು ಮಾಡ್ತೀವಿ. ಪರಿಸರ ಮಾಲಿನ್ಯ ಹೆಚ್ಚಿಸುತ್ತೇವೆ. ಸ್ವಲ್ಪ ಬುದ್ಧಿಗೆ ಕಸರತ್ತು ಕೊಟ್ಟರೆ ಮಾಲಿನ್ಯವನ್ನೂ ತಡೆಗಟ್ಟಬಹುದು. ನಮ್ಮ ಮನೆಯ ಅಂದವನ್ನೂ ಹೆಚ್ಚಿಸಬಹುದು.

ನಗರ ಪ್ರದೇಶದಲ್ಲಿ ಅಡಿ ಜಾಗಕ್ಕೂ ಈಗ ಪಾಟ್ಲಿನಂ ಬೆಲೆ. ಹೀಗಾಗಿ ಗಾರ್ಡನ್‌ಗೆ ಅಂತ ಜಾಗ ಮೀಸಲಿಡೋದು ಕಡಿಮೆ-ಕಷ್ಟದ ಮಾತು. ಆದ್ರೂ ಮನೆ ಮುಂದೆ ಒಂದು ಕೈತೋಟವಿದ್ದರೆ ಎಷ್ಟು ಚೆನ್ನ?

ನಿಮಗೂ ಇಂಥ ಆಸೆ ಇದ್ದರೆ ತಡವೇಕೆ. ಬಳಸಿಟ್ಟ ಪ್ಲಾಸ್ಟಿಕ್ ಬಾಟಲಿಗಳನ್ನು ಒಟ್ಟು ಮಾಡಿರಿ, ಅವುಗಳಿಂದಲೇ ಸುಂದರ ಉದ್ಯಾನವನ ಮಾಡಿರಿ. ಮನೆ ಹಚ್ಚಹಸಿರಿನ ನಡುವೆ ಕಂಗೊಳಿಸುವಂತೆ ಮಾಡಿರಿ.

RELATED ARTICLES  ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಮತ್ತು ಸೇವಾ ಘಟಕವನ್ನು ಸ್ಥಾಪಿಸಲು ಅರ್ಜಿ ಆಹ್ವಾನ.

ಪ್ಲಾಸ್ಟಿಕ್ ಬಾಟಲಿಗಳನ್ನು ಭಿನ್ನ ಅಳತೆ-ಆಕಾರದಲ್ಲಿ ಕತ್ತರಿಸಿ, ಅವಕ್ಕೆ ಮಣ್ಣು-ಗೊಬ್ಬರ ತುಂಬಿ, ಬೀಜ ಬಿತ್ತಿ ಹೂವಿನ ಗಿಡ ಬೆಳೆಸುವುದು. ನಂತರ ಕಾಂಪೌಂಡ್, ಕಿಟಕಿಗಳಲ್ಲಿ ಜೋಡಿಸಬಹುದು. ಖಾಲಿ ಗೋಡೆಗೆ ಮೇಲಿನಿಂದ ದಾರಕಟ್ಟಿ (ಚಿತ್ರದಲ್ಲಿರುವಂತೆ) ತೂಗುಬಿಡಬಹುದು.

ಉದ್ದವಾದ ಹಗ್ಗಕ್ಕೆ ಬಾಟಲಿಗಳನ್ನು ಒಂದರ ಮೇಲೊಂದರಂತೆ ಒಂದು ನಿರ್ದಿಷ್ಟ ಅಂತರದಲ್ಲಿ ಕಟ್ಟಿ ಕಾಂಪೌಂಡ್, ಮನೆಯ ಹೊರಗೋಡೆ ಮೇಲೆ ತೂಗುಬೀಳುವಂತೆ ನೇತುಹಾಕಿರಿ. ನಂತರ ನೋಡಿ ನಿಮ್ಮ ಮನೆಯ ಹೊರನೋಟವೇ ಭಿನ್ನವಾಗಿರುತ್ತದೆ. ಮನೆ ಒಳಗೂ ತಂಪು ಹವೆ ಇರುವಂತೆ ಮಾಡುತ್ತದೆ.

ಬಾಟಲಿಯಿಂದ ಬಾಟಲಿಗೆ ಸಣ್ಣ ಕೊಳವೆ ಸಂಪರ್ಕದ ವ್ಯವಸ್ಥೆ ಮಾಡಿದರೆ ನೀರು ಹಾಕುವುದಕ್ಕೂ ಸುಲಭ. ಈ ಬಾಟಲಿ ಉದ್ಯಾನವನ ರೂಪಿಸಿಕೊಳ್ಳಲು ಹೆಚ್ಚು ಹಣವೂ ಖರ್ಚಾಗುವುದಿಲ್ಲ. ಶ್ರಮವೂ ಹೆಚ್ಚಿಲ್ಲ. ಸಮಯವಾದಾಗ ಒಂದೊಂದಾಗಿ ಬಾಟಲಿ-ಗಿಡಗಳನ್ನು ಸಿದ್ಧಪಡಿಸಿ ಜೋಡಿಸಿದರೂ ಆಯಿತು.

RELATED ARTICLES  ಭಾರತೀಯ ರೈಲ್ವೆಯ ಆಗ್ನೇಯ ಕೇಂದ್ರ ವಿಭಾಗದಿಂದ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ.

ತಂಪುಪಾನೀಯ ಕುಡಿದಾಗಷ್ಟೇ ನಮ್ಮ ಒಡಲು ತಂಪಾಗಿಡಬಲ್ಲದು. ಆದರೆ ಖಾಲಿ ಬಾಟಲಿಯನ್ನು ಸದ್ಬಳಕೆ ಮಾಡಿಕೊಂಡರೆ ಸದಾ ನಮ್ಮನ್ನು, ನಮ್ಮ ಮನೆಯನ್ನು ತಂಪಾಗಿಡುತ್ತದೆ.

ಬಣ್ಣದ ಬಾಟಲಿಗಳಲ್ಲಿ ಗಿಡ ಬೆಳೆಸಿದ್ದಲ್ಲಿ ಮನೆಯ ಒಳ ಗೋಡೆಗೂ ನೇತುಹಾಕಿ, ಒಳಾಂಗಣದ ಸೊಬಗು ಹೆಚ್ಚಿಸಿಕೊಳ್ಳಬಹುದು. ಆದರೆ, ನೀವು ಎಂಥ ಬಾಟಲಿ, ಯಾವ ಹೂವಿನ ಗಿಡ ಆಯ್ಕೆ ಮಾಡಿಕೊಳ್ಳುತ್ತೀರಿ? ಅವನ್ನು ಯಾವ ಗೋಡೆಗೆ ಹೇಗೆ ತೂಗುಹಾಕುತ್ತೀರಿ ಎಂಬುದರ ಮೇಲೆ ಒಳಾಂಗಣದ ಅಂದ ನಿರ್ಧಾರವಾಗುತ್ತದೆ.

ಮನೆ ಸಣ್ಣದೋ-ದೊಡ್ಡದೋ, ಕಡಿಮೆ ಖರ್ಚಿನಲ್ಲಿ ಅಂಗಳ-ಒಳಾಂಗಣದಲ್ಲಿ ತೂಗಾಡುವ ಬಾಟಲಿಗಳ ಮೂಲಕ ಪುಟ್ಟ ಹಸಿರು ತೋಟ ನಿರ್ಮಿಸಿಕೊಳ್ಳಬಹುದು. ತಡವೇಕೆ? ನೀವೂ ಟ್ರೈ ಮಾಡಿ.