ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ಮಾರ್ಚ್‌ 1ರಿಂದ 17ರವರೆಗೆ ನಡೆಯಲಿದ್ದು, ಈ ಬಾರಿ 6.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕಳೆದ ವರ್ಷ 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಆರು ಸಾವಿರದಷ್ಟು ಹೆಚ್ಚಾಗಿದೆ. ರಾಜ್ಯದ 1,004 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ತಾವು ಓದಿದ ಕಾಲೇಜು ಬಿಟ್ಟು ಬೇರೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.

ವಿಚಕ್ಷಣಾ ದಳ: ರಾಜ್ಯದ 32 ಜಿಲ್ಲೆಗಳಲ್ಲೂ ತಲಾ ಒಂದೊಂದು ಜಿಲ್ಲಾ ಮಟ್ಟದ ವಿಚಕ್ಷಣಾ ದಳ ರಚಿಸಲಾಗಿದೆ. ಈ ದಳದಲ್ಲಿ ತಲಾ ಮೂವರು ಅಧಿಕಾರಿಗಳು ಇರುತ್ತಾರೆ. ಇದಲ್ಲದೆ ರಾಜ್ಯದ ತಾಲ್ಲೂಕುಗಳಲ್ಲಿ ಒಟ್ಟಾರೆ 286 ಜಾಗೃತ ದಳಗಳನ್ನು ರಚಿಸಲಾಗಿದೆ. ಇದರಲ್ಲೂ ತಲಾ ಮೂವರು ಅಧಿಕಾರಿಗಳು ಇರುತ್ತಾರೆ.

ಅಲ್ಲದೆ ಪರೀಕ್ಷಾ ಕೇಂದ್ರಕ್ಕೊಬ್ಬರಂತೆ ಒಟ್ಟು 1,004 ಮುಖ್ಯ ಪರೀಕ್ಷಾ ಮೇಲ್ವಿಚಾರಕರು , ಸಹ ಮುಖ್ಯ ಪರೀಕ್ಷಾ ಮೇಲ್ವಿಚಾರಕರು, ಕಚೇರಿ ಪರೀಕ್ಷಾ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ‘ಸಿಟ್ಟಿಂಗ್‌ ಸ್ಕ್ವಾಡ್‌’ಗಳನ್ನು ನೇಮಿಸಲಾಗಿದೆ. ಪರೀಕ್ಷಾ ಕಾರ್ಯಗಳಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂದಿಯು ಗುರುತು ಪತ್ರಗಳನ್ನು ಧರಿಸಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತವಾದ ಬೆಂಚ್‌ ಮತ್ತು ಡೆಸ್ಕ್‌ಗಳ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯದಂತೆ ಎಚ್ಚರವಹಿಸಬೇಕು ಎಂದು ಇಲಾಖೆ ಸೂಚಿಸಿದೆ.

ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆ :

ಈ ಮೊದಲು ತಾಲ್ಲೂಕು ಕೇಂದ್ರಗಳ ಖಜಾನೆಗಳ ಭದ್ರತಾ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇಡಲಾಗುತ್ತಿತ್ತು. ಆದರೆ ಕಳೆದ ಸಾಲಿನಿಂದ ಜಿಲ್ಲಾ ಕೇಂದ್ರದ ಖಜಾನೆಯಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿಡಲಾಗುತ್ತಿದೆ.

2015–16ನೇ ಸಾಲಿನ ಪರೀಕ್ಷೆಯಲ್ಲಿ ರಸಾಯನ ವಿಜ್ಞಾನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಕಳೆದ ವರ್ಷದಿಂದ ‘ಸೆಕ್ಯೂರ್‌ ಎಕ್ಸಾಮಿನೇಷನ್‌ ಸಿಸ್ಟಂ’ ಅಳವಡಿಸಿಕೊಂಡಿದೆ. ಜಿಲ್ಲಾಧಿಕಾರಿ, ಜಿಲ್ಲಾ ಖಜಾನಾಧಿಕಾರಿ ಮತ್ತು ಪಿಯು ಇಲಾಖೆಯ ಉಪ ನಿರ್ದೇಶಕರನ್ನೊಳಗೊಂಡ ಪ್ರಶ್ನೆ ಪತ್ರಿಕಾ ಪಾಲಕರ ಸಮಿತಿ ರಚಿಸಲಾಗಿದೆ.

ಜಿಪಿಎಸ್ ಅಳವಡಿಕೆ:

ಪ್ರಶ್ನೆ ಪತ್ರಿಕೆ ವಿತರಿಸುವ ಕಾರ್ಯಕ್ಕೆ ಬಳಸುವ ಎಲ್ಲ ವಾಹನಗಳಿಗೂ ‘ಜಿಪಿಎಸ್‌ ಟ್ರಾಕಿಂಗ್‌ ಸಿಸ್ಟಂ’ ಅಳವಡಿಸಲಾಗಿದ್ದು, ವಾಹನಗಳ ಚಲನೆಯ ಮೇಲೂ ಇಲಾಖೆ ನಿಗಾ ಇಡಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

* ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ

* ಕೇಂದ್ರಗಳ ಸಮೀಪದ ಝೆರಾಕ್ಸ್‌ ಅಂಗಡಿಗಳನ್ನು ಮುಚ್ಚಿಸಲು ಆದೇಶ

* ಪ್ರತಿ ಕೇಂದ್ರಕ್ಕೆ ಪೊಲೀಸ್‌ ಸಿಬ್ಬಂದಿ ನಿಯೋಜನೆ

* ಒಟ್ಟು 39 ವಿಷಯಗಳಲ್ಲಿ ಪರೀಕ್ಷೆ

* ಇದೇ ಮೊದಲ ಬಾರಿ ಎನ್‌ಎಸ್‌ಕ್ಯೂಎಫ್‌ನ ಐದು ವಿಷಯಗಳಿಗೂ ಪರೀಕ್ಷೆ

* ಪ್ರತಿ ಕೇಂದ್ರಕ್ಕೂ ಆರೋಗ್ಯ ಸಹಾಯಕಿಯರ ನಿಯೋಜನೆ

ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ

ಎಲ್ಲ 1,004 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ಯಾವುದೇ ಕೇಂದ್ರವನ್ನು ಸೂಕ್ಷ್ಮ, ಅತಿ ಸೂಕ್ಷ್ಮ ಕೇಂದ್ರಗಳು ಎಂದು ಇಲಾಖೆ ಗುರುತಿಸಿಲ್ಲ.

ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವ ಮತ್ತು ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಸಲು ಇಲಾಖೆ ಸೂಚಿಸಿದೆ.

ವಿದ್ಯಾರ್ಥಿಗಳ ವಿವರ

ಹೊಸಬರು– 5,39,340

ಪುನರಾವರ್ತಿತರು– 1,22,346

ಖಾಸಗಿ– 28,374

ಬಾಲಕರು– 3,52,292

ಬಾಲಕಿಯರು– 3,37,860

ಕಲಾ– 2,01,278

ವಾಣಿಜ್ಯ– 2,56,479

ವಿಜ್ಞಾನ– 2,32,393