ಹೊನ್ನಾವರ: “ಶಾಸಕನಾಗಿ ಆಯ್ಕೆ ಮಾಡಿದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಕಳೆದ ಐದು ವರ್ಷಗಳಲ್ಲಿ ಅವರ ಜವಾನನಂತೆ ಕೆಲಸ ಮಾಡಿದ್ದು ಕುಗ್ರಾಮಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನರು ಸರ್ಕಾರಕ್ಕೆ ಭರಿಸುವ ತೆರಿಗೆ ಹಣ ಸದ್ವಿನಿಯೋಗವಾಗುವಂತೆ ನೋಡಿಕೊಂಡಿದ್ದೇನೆ’ ಎಂದು ಶಾಸಕ ಮಂಕಾಳ ಎಸ್.ವೈದ್ಯ ತಿಳಿಸಿದರು.
ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿ ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
“ಎಲ್ಲರಿಗೆ ಶಿಕ್ಷಣ ಸಿಗಬೇಕೆಂಬುದು ನನ್ನ ಕನಸಾಗಿದ್ದು ಅದಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ.ಭಟ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 7 ಸಾವಿರ ಮನೆಗೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು ಗುಡಿಸಲು ಮುಕ್ತ ಕ್ಷೇತ್ರವಾಗಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅನಿಲ ಭಾಗ್ಯ ಯೋಜನೆಯ ಮೂಲಕ ಕೆಲವು ಗ್ರಾಮಗಳನ್ನು ಹೊಗೆಮುಕ್ತವಾಗಿಸುವ ಪ್ರಯತ್ನ ನಡೆದಿದೆ.ಪಕ್ಷ ಹಾಗೂ ಜಾತಿ ರಾಜಕಾರಣ ಮಾಡದೆ ಕೇವಲ 50 ಮತಗಳಿರುವ ಕಡ್ಕಾಲ್‍ನಂತ ಕುಗ್ರಾಮಕ್ಕೂ 3 ಕೋಟಿ ರೂ. ಅನುದಾನ ನೀಡಿದ್ದೇನೆ.ಹೆರಾವಲಿ ಗ್ರಾಮದ ವಿವಿಧ ಮಜರೆಗಳಲ್ಲಿ ಡಾಂಬರು,ಸಿಮೆಂಟ್ ರಸ್ತೆಗಳ ನಿರ್ಮಾಣಕ್ಕಾಗಿ 3 ಕೋಟಿ ರೂಪಾಯಿಗೂ ಅಧಿಕ ಅನುದಾನ ಕಲ್ಪಿಸಲಾಗಿದೆ’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಗಣಪತಿ ನಾಯ್ಕ ಮಾತನಾಡಿ,”ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೈದ್ಯ 22 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ’ ಎಂದು ತಿಳಿಸಿದರು.
ಸದಸ್ಯ ಗಣೇಶ ನಾಯ್ಕ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಷ್ಪಾ ನಾಯ್ಕ,ಸವಿತಾ ಗೌಡ,ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ನಾಯ್ಕ,ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ ನಾಯ್ಕ ಬೀಳ್ಮಕ್ಕಿ,ವೆಂಕಟೇಶ ನಾಯ್ಕ,ಸವಿತಾ ಹಳ್ಳೀರ,ಮುಖಂಡರಾದ ಚಂದ್ರಶೇಖರ ಗೌಡ,ಕೃಷ್ಣ ಗೌಡ,ಎಚ್.ಎಲ್.ಗುರುದತ್ತ,ಎಂಜಿನಿಯರ್ ಆರ್.ಜಿ.ಭಟ್ಟ,ಗುತ್ತಿಗೆದಾರ ಸುರೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಮಾದೇವಿ ಗೌಡ ಪ್ರಾರ್ಥನಾ ಗೀತೆ ಹಾಡಿದರು.ವಿಜಯಲಕ್ಷ್ಮಿ ಹೆಗಡೆ ಸನ್ಮಾನಿತರನ್ನು ಅಭಿನಂದಿಸಿದರು.ನಾಗರಾಜ ಹೆಗಡೆ ಅಪಗಾಲ ಸ್ವಾಗತಿಸಿದರು.ಎಂ.ಜಿ.ಹೆಗಡೆ ವಂದಿಸಿದರು.