ನವದೆಹಲಿ: ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿಯಿಂದಾಗಿ ಸ್ವಲ್ಪ ಕಳೆಗುಂದಿದ್ದ ಭಾರತದ ಆರ್ಥಿಕತೆ ಮತ್ತೆ ಚೇತರಿಕೆ ಹಾದಿ ಹಿಡಿದಿದೆ. ತ್ವರಿತ ಬೆಳವಣಿಗೆಯ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪೂರಕವಾಗಿ ಭಾರತದ ಜಿಡಿಪಿ ಬೆಳವಣಿಗೆ ದರ 2ನೇ ತ್ರೖೆಮಾಸಿಕ (ಜುಲೈ-ಸೆಪ್ಟೆಂಬರ್)ದಲ್ಲಿದ್ದ ಶೇಕಡ 6.3ರಿಂದ 3ನೇ ತ್ರೖೆಮಾಸಿಕ (ಅಕ್ಟೋಬರ್-ಡಿಸೆಂಬರ್)ದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಿದೆ. ಈ ಮೂಲಕ ಚೀನಾವನ್ನು ಹಿಂದಿಕ್ಕಿ ಅರ್ಥ ವ್ಯವಸ್ಥೆಯ ಕುರಿತು ಧನಾತ್ಮಕ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ.
ಪರಿಣಾಮ, 2017-18ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಈಗಿರುವ ನಿರೀಕ್ಷಿತ ಶೇಕಡ 6.6 ಮೀರಬಹುದೆಂದು ಅಂದಾಜಿಸಲಾಗಿದೆ.
ಕೇಂದ್ರೀಯ ಸಾಂಖ್ಯಿಕ ಕಚೇರಿ(ಸಿಎಸ್ಒ) ಬುಧವಾರ ಬಿಡುಗಡೆ ಮಾಡಿರುವ ಮೂರನೇ ತ್ರೖೆಮಾಸಿಕದ ದತ್ತಾಂಶ ಪ್ರಕಾರ, ಭಾರತದ ಅರ್ಥ ವ್ಯವಸ್ಥೆಯಲ್ಲಿ ಹೂಡಿಕೆ ಮತ್ತು ಖರ್ಚು ಮಾಡುವ ಸಾಮರ್ಥ್ಯ ಹೆಚ್ಚಾಗಲಿದ್ದು, ಆರ್ಥಿಕತೆ ಇನ್ನಷ್ಟು ಸುಧಾರಿಸುವ ಲಕ್ಷಣ ಗೋಚರಿಸಿವೆ.
ಅನಾಣ್ಯೀಕರಣ, ಜಿಎಸ್ಟಿ ಜಾರಿ ಮುಂತಾದ ಆರ್ಥಿಕ ಸುಧಾರಣಾ ಕ್ರಮ ಗಳಿಂದಾಗಿ ಜಿಡಿಪಿ ಬೆಳವಣಿಗೆ ದರ ಇಳಿಕೆಯ ಹಾದಿ ಹಿಡಿದಿತ್ತು. 2016ರ ನವೆಂಬರ್ 8ರಂದು ಅನಾಣ್ಯೀಕರಣ ಘೋಷಿಸಿದ ನಂತರದಲ್ಲಿ ಆ ತ್ರೖೆಮಾಸಿಕ(2016-17ರ ಅಕ್ಟೋಬರ್-ಡಿಸೆಂಬರ್)ದ ವರದಿ ಬಂದಾಗ ಹಿಂದಿನ ತ್ರೖೆಮಾಸಿಕ(2016-17ರ ಜುಲೈ-ಸೆಪ್ಟೆಂಬರ್) ದಲ್ಲಿದ್ದ ಶೇಕಡ 7.5 ಜಿಡಿಪಿ, ಶೇಕಡ 7ಕ್ಕೆ ಇಳಿದಿತ್ತು. ನಂತರ ನಾಲ್ಕನೇ ತ್ರೖೆಮಾಸಿಕದಲ್ಲಿ ಜಿಡಿಪಿ ದರ 6.1ಕ್ಕೆ ಇಳಿಯಿತು. ಪ್ರಸಕ್ತ ಹಣಕಾಸು ವರ್ಷ(2017-18) ಮೊದಲ ತ್ರೖೆಮಾಸಿಕದಲ್ಲಿ ಶೇಕಡ 5.7ಕ್ಕೆ ಇಳಿದಿದ್ದ ಜಿಡಿಪಿ ದರ ಎರಡನೇ ತ್ರೖೆಮಾಸಿಕದಲ್ಲಿ ಕೊಂಚ ಚೇತರಿಕೆ ಕಂಡು ಶೇಕಡ 6.3ಕ್ಕೆ ಏರಿಕೆಯಾಗಿತ್ತು. ಈಗ ಮತ್ತೆ ಶೇಕಡ 0.9 ಅಂಶ ಏರಿಕೆ ಕಂಡ ಕಾರಣ, ಭಾರತದ ಆರ್ಥಿಕತೆ ಮತ್ತೆ ಪುಟಿದೇಳುತ್ತಿರುವ ಸಂದೇಶ ರವಾನೆಯಾಗಿದೆ.
ಕಾರ್ಪೆರೇಟ್ ಆದಾಯ, ಕೈಗಾರಿಕೆ ಉತ್ಪಾದನೆ ದತ್ತಾಂಶ ಮುಂತಾದವು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪ್ರಭಾವ ಬೀರುವ ಗರಿಷ್ಠ ಸಂಕೇತಗಳಾಗಿ ಹೊರಹೊಮ್ಮಿವೆ. ಸರ್ಕಾರ ಅಕ್ಟೋ ಬರ್-ಮಾರ್ಚ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇಕಡ 7ರ ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಿತ್ತು.
ಆರೋಗ್ಯವಂತ ಅರ್ಥ ವ್ಯವಸ್ಥೆ: ಕೇಂದ್ರೀಯ ಸಾಂಖ್ಯಿಕ ಕಚೇರಿ ಬುಧವಾರ ಬಿಡುಗಡೆ ಮಾಡಿದ ದತ್ತಾಂಶ ಕಳೆದ ಮೂರು ತ್ರೖೆಮಾಸಿಕಗಳ ವಾಸ್ತವಿಕ ದತ್ತಾಂಶವನ್ನು ಆಧರಿಸಿದ್ದಾಗಿದೆ. ಹೀಗಾಗಿ ಇದು ದೇಶದ ಅರ್ಥ ವ್ಯವಸ್ಥೆ ಆರೋಗ್ಯದ ಸ್ಥಿತಿಗತಿ ಉತ್ತಮವಾಗಿರುವ ಚಿತ್ರಣವನ್ನೇ ನೀಡಿದೆ. ಒಟ್ಟು ಮೌಲ್ಯ ವರ್ಧನೆ(ಜಿವಿಎ) ಲೆಕ್ಕಾಚಾರವನ್ನು ಮಾಡುವಾಗ ಸಿಎಸ್ಒ, ನಿವ್ವಳ ತೆರಿಗೆಯಿಂದ ಜಿಡಿಪಿಯನ್ನು ಕಳೆಯಲಾಗುತ್ತದೆ. ಅರ್ಥವ್ಯವಸ್ಥೆಯಲ್ಲಿನ ಸರಕು ಮತ್ತು ಸೇವೆಗಳ ಉತ್ಪಾದನೆಯ ಮೌಲ್ಯಗಳ ಸರಾಸರಿ ಲೆಕ್ಕ ಹಾಕುವಾಗ ಜಿವಿಎ ಹೆಚ್ಚು ವಾಸ್ತವಿಕ ಮಾನದಂಡವಾಗಿರುತ್ತದೆ.
ಇದು ಕಾರಣ…
ಉತ್ಪಾದನಾ ಕ್ಷೇತ್ರದ ಜಿಡಿಪಿ 3ನೇ ತ್ರೖೆಮಾಸಿಕದಲ್ಲಿ ಶೇಕಡ 8.1 ತಲುಪಿದ್ದು, ವಾರ್ಷಿಕ ಜಿಡಿಪಿ ಈಗ ಅಂದಾಜಿಸಿರುವ ಶೇಕಡ 5.1 ದಾಟಿ ಮುನ್ನಡೆಯುವ ನಿರೀಕ್ಷೆ ಇದೆ. ಜಿಎಸ್ಟಿ ಅನುಷ್ಠಾನಕ್ಕೆ ಎದುರಾದ ಆರಂಭಿಕ ಅಡ್ಡಿ ಆತಂಕದ ಕಾರಣಕ್ಕೆ ಕಾರ್ಖಾನೆ ಮತ್ತು ಸೇವಾ ವಲಯದ ಸಂಸ್ಥೆಗಳ ಉತ್ಪಾದಕತೆಯಲ್ಲಿ ಹಿನ್ನಡೆ ಉಂಟಾಗಿತ್ತು. ಈಗ ಆ ಲೋಪದೋಷ ಸರಿಪಡಿಸಿಕೊಂಡಿರುವ ಫಲಿತಾಂಶ ಜಿಡಿಪಿ ಬೆಳವಣಿಗೆಯಲ್ಲಿ ದಾಖಲಾಗಿದೆ.
ವ್ಯವಹಾರ ತಂತ್ರದ ಭಾಗವಾಗಿ ಜೂನ್ನಲ್ಲಿ ಉತ್ಪಾದನೆ ಕಡಿತಗೊಳಿಸಿದ್ದ ಕಂಪನಿಗಳು, ನಂತರದ ತಿಂಗಳುಗಳಲ್ಲಿ ಮತ್ತೆ ಸಹಜವಾಗಿ ಕಾರ್ಯನಿರ್ವಹಿಸಲಾರಂಭಿಸಿವೆ.
ಸರ್ಕಾರದ ಕಂದಾಯ ವೆಚ್ಚ(ಬಡ್ಡಿ ರಹಿತ ಪಾವತಿ) ಹಿಂದಿನ ವರ್ಷ ಶೇಕಡ 12 ಇದ್ದುದು, ಶೇಕಡ 24ಕ್ಕೆ ಏರಿಕೆಯಾಗಿದೆ.
ಕೃಷಿಯೇತರ ಕ್ಷೇತ್ರಗಳಲ್ಲಿ ಉತ್ತಮ ಹೂಡಿಕೆಯ ಕಾರಣದಿಂದ ಸುಧಾರಣೆಯ ಲಕ್ಷಣಗಳು ಕಂಡುಬಂದಿದ್ದು, ಸಾರ್ವಜನಿಕ ಆಡಳಿತ ಮತ್ತು ಸಾಲದ ಬೆಳವಣಿಗೆಯ ಸೂಚ್ಯಂಕಗಳು ಕೂಡ ಧನಾತ್ಮಕವಾಗಿರುವುದು.
ಕೃಷಿ ಕ್ಷೇತ್ರದ ಜಿಡಿಪಿ ಮೂರನೇ ತ್ರೖೆಮಾಸಿಕ(ಅಕ್ಟೋಬರ್-ಡಿಸೆಂಬರ್)ದಲ್ಲಿ ಶೇಕಡ 4.1 ತಲುಪಿದೆ. ಈ ಹಣಕಾಸು ವರ್ಷ ಇದು ಶೇಕಡ 3 ತಲುಪುವ ನಿರೀಕ್ಷೆ ಇದೆ. ಕೃಷಿ ಕ್ಷೇತ್ರದಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಹೆಚ್ಚೇನೂ ಧನಾತ್ಮಕ ಬದಲಾವಣೆ ಇಲ್ಲ.