ಬೆಂಗಳೂರು: ಪುನೀತ್ ರಾಜ್​ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್​ನ ಹೊಸ ಚಿತ್ರದ ಕುರಿತು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಶೀರ್ಷಿಕೆ ಏನು ಎಂಬುದನ್ನು ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ. ಈ ನಡುವೆ ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗಿದೆ. ಹಾಗಾದರೆ ಈ ಚಿತ್ರದಲ್ಲಿ ಪುನೀತ್​ಗೆ ನಾಯಕಿ ಯಾರು? ಹೊಸ ಮುಖವನ್ನೇ ಪರಿಚಯಿಸಬೇಕು ಎಂಬುದು ಚಿತ್ರತಂಡದ ಉದ್ದೇಶ.

ಹಾಗಾಗಿ ಪರಭಾಷಾ ನಟಿಗೆ ಮಣೆ ಹಾಕಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ಹೊಸ ನಟಿ ಪ್ರಿಯಾಂಕಾ ಜಾವಾಲ್ಕರ್ ಅವರನ್ನು ಕರೆತರುವ ಸಿದ್ಧತೆ ನಡೆದಿದೆಯಂತೆ. ಚಿತ್ರರಂಗಕ್ಕೆ ಪ್ರಿಯಾಂಕಾ ಹೊಸ ಪರಿಚಯ. ಮೂಲತಃ ಮಹಾರಾಷ್ಟ್ರದವರಾದ ಅವರು ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಫ್ಯಾಷನ್ ಡಿಸೈನಿಂಗ್​ನಲ್ಲಿ ಡಿಪ್ಲೊಮಾ ಕೂಡ ಮಾಡಿಕೊಂಡಿದ್ದಾರೆ. ಕಿರುಚಿತ್ರಗಳಲ್ಲಿ ನಟಿಸಿದ ಅನುಭವವೂ ಇದೆಯಂತೆ. ಅವರು ಬಣ್ಣದ ಲೋಕಕ್ಕೆ ಕಾಲಿಡುತ್ತಿರುವುದು ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ನಟಿಸುತ್ತಿರುವ ‘ಟ್ಯಾಕ್ಸಿ ವಾಲ’ ಚಿತ್ರದ ಮೂಲಕ. ಈಗ ನಿರ್ದೇಶಕ ಪವನ್ ಒಡೆಯರ್ ಕಣ್ಣಿಗೂ ಪ್ರಿಯಾಂಕಾ ಕಾಣಿಸಿದ್ದಾರೆ.

RELATED ARTICLES  ಹೊನ್ನಾವರ ತಾಲೂಕಿನ ಒಟ್ಟು 24 ಗ್ರಾ.ಪಂ ನ ಅಧ್ಯಕ್ಷ - ಉಪಾಧ್ಯಕ್ಷರ ವಿವರ ಇಲ್ಲಿದೆ.

ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅವರು ಸಹಿ ಮಾಡಿದ್ದಾರೋ ಇಲ್ಲವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ ಎನ್ನುತ್ತಿವೆ ಮೂಲಗಳು. ಒಂದು ವೇಳೆ ಪ್ರಿಯಾಂಕಾ ಆಯ್ಕೆ ಆಗಿರುವುದು ನಿಜವೇ ಹೌದಾದರೆ ಕನ್ನಡದಲ್ಲಿ ಅವರಿಗೆ ಇದು ಚೊಚ್ಚಲ ಚಿತ್ರವಾಗಲಿದೆ. ತೆಲುಗಿನಲ್ಲಿ ಏಕಾಏಕಿ ಸ್ಟಾರ್​ಡಮ್ ಹೆಚ್ಚಿಸಿಕೊಂಡಿರುವ ವಿಜಯ್ ದೇವರಕೊಂಡ ಮತ್ತು ಕನ್ನಡದ ಟಾಪ್ ನಟರಲ್ಲೊಬ್ಬರಾದ ಪುನೀತ್ ಜತೆ ತೆರೆಹಂಚಿಕೊಳ್ಳುವ ಚಾನ್ಸ್ ಗಿಟ್ಟಿಸಿರುವುದು ಪ್ರಿಯಾಂಕಾ ಹೆಚ್ಚುಗಾರಿಕೆ. ಈ ಚಿತ್ರಕ್ಕೆ ರಾಕ್​ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದು, ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾ. 8ರಂದು ಶೂಟಿಂಗ್ ಶುರುವಾಗಲಿದೆ. ‘ಅಜಯ್’ ಮತ್ತು ‘ಮೌರ್ಯ’ ಚಿತ್ರದ ಬಳಿಕ ಮೂರನೇ ಬಾರಿಗೆ ಪುನೀತ್-ರಾಕ್​ಲೈನ್ ಒಂದಾಗುತ್ತಿದ್ದರೆ, ‘ರಣವಿಕ್ರಮ’ ನಂತರ ಪವನ್ ಒಡೆಯರ್ ಎರಡನೇ ಬಾರಿಗೆ ಪುನೀತ್​ಗೆ ಆಕ್ಷನ್-ಕಟ್ ಹೇಳಲಿದ್ದಾರೆ. ಕಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ಡಿ. ಇಮಾನ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

RELATED ARTICLES  108 ತುರ್ತು ಸೇವೆಯಲ್ಲಿ ಸಮಸ್ಯೆ : ಆರೋಗ್ಯ ಸಚಿವರು ಹೇಳಿದ್ದೇನು?