ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿ ಮಾದನಗೇರಿ ಹಾಗೂ ಊರ ನಾಗರಿಕರ ಆಶ್ರಯದಲ್ಲಿ ಹರಿಕಾಂತ ಸಮಾಜದವರಿಗಾಗಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಾಗೂ ರಂಗೋಲಿ ಸ್ಪರ್ಧೆಯನ್ನು ಮಾದನಗೇರಿಯ ಹರಿಕಾಂತ ಸಮಾಜದ ಗಣೇಶೋತ್ಸವ ಸಮಿತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾವಳಿಯ ಉದ್ಘಾಟಕರು ಹಾಗೂ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಕಬಡ್ಡಿ ನಮ್ಮ ಜಾನಪದ ಸೊಗಡಿನ ದೇಶೀಯ ಕ್ರೀಡೆ ಅಲ್ಲದೇ ದೈಹಿಕ ಬಲ ಮತ್ತು ಚುರುಕುತನದಿಂದ ಕೂಡಿದ ಕುತೂಹಲಕರ ಕ್ರೀಡೆಯಾಗಿದೆ. ಹರಿಕಾಂತ ಸಮಾಜದ ಈ ಗಣೇಶೋತ್ಸವ ಸಮಿತಿ ಗಣೇಶ ಚತುರ್ಥಿ ಆಚರಣೆಗೆ ಮಾತ್ರ ಸೀಮಿತವಾಗಿರದೇ ದೇಶೀಯ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಇಂತಹ ಪಂದ್ಯಾವಳಿಗಳನ್ನು ಹಮ್ಮಿಕೊಂಡಿರುವುದರೊಂದಿಗೆ ಮಹಿಳೆಯರನ್ನು ಹುರಿದುಂಬಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ. ಮಹಿಳೆಯರು ಕೂಡಾ ಸಮಾಜದ ಆಗುಹೋಗುಗಳ ಬಗ್ಗೆ ತಿಳಿದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವ ಪ್ರಯತ್ನ ನಡೆಸಬೇಕು ಇದಕ್ಕೆ ಪುರುಷರು ಹೆಚ್ಚು ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲೂ ಈ ಸಮಿತಿಯ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳು ಜರುಗಲಿ. ಒಗ್ಗಟ್ಟಿನೊಂದಿಗೆ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಪ್ರಾಮಾಣ ಕ ಪ್ರಯತ್ನ ನಡೆಯಲಿ ಎಂಬ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಅಂಕಣ ಉದ್ಘಾಟಕರಾಗಿ ಆಗಮಿಸಿದ ಜಿ.ಪಂ.ಸದಸ್ಯ ಪ್ರದೀಪ ನಾಯಕ ದೇವರಬಾವಿ, ನಾರಾಯಣ ನಾಯ್ಕ, ಗೋಪಾಲ ಹೊಸ್ಕಟ್ಟಾ, ಬೀರಾ ವಿ. ಗೌಡ, ಸತೀಶ ಗೌಡ, ಗೋವಿಂದ ಎಲ್. ಹರಿಕಾಂತ, ಬಾಬು ಡಿ. ಹರಿಕಾಂತ, ಆನಂದು ಎನ್. ಹರಿಕಾಂತ, ಬೊಮ್ಮಯ್ಯ ಹರಿಕಾಂತ, ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.