ಯಲ್ಲಾಪುರ ; ಹಿಂದೂತ್ವ ಹಾಗೂ ರಾಷ್ಟ್ರೀಯ ವಿಚಾರಧಾರೆಗಳಿಗೆ ಬಲಿದಾನಗೈದಿರುವ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಮರುಸ್ಥಾಪಿಸುವ ಪಣವನ್ನು ತೊಟ್ಟು, ಹಿಂದೂ ವಿರೋಧಿ ಸಿದ್ದರಾಮಯ್ಯ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯುವ ಸಂಕಲ್ಪದೊಂದಿಗೆ ಮಾರ್ಚ್ 3ರಿಂದ 6ರ ವರೆಗೆ ಮಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
ಅವರು ಗುರುವಾರ ಮಧ್ಯಾಹ್ನ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮಾರ್ಚ 3 ರಂದು ಬೆಳಿಗ್ಗೆ 10 ಗಂಟೆಯಿಂದ ಅಂಕೋಲಾದಿಂದ ಪಾದಯಾತ್ರೆ ಹೂರಟು ಮಧ್ಯಾಹ್ನ 12 ಗಂಟೆಗೆ ಅಂಕೋಲಾದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಯಿಂದ ಕುಮಟಾದಿಂದ ಪಾದಯಾತ್ರೆ ಹೊರಟು ಸಂಜೆ 5 ಗಂಟೆಗೆ ಕುಮಟದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಮಾರ್ಚ್ 4ರಂದು ಬೆಳಿಗ್ಗೆ ಹೊನ್ನಾವರದಲ್ಲಿ ಪಾದಯಾತ್ರೆ ಹೊರಟು ಮಧ್ಯಾಹ್ನ 12 ಗಂಟೆಗೆ ಹೊನ್ನಾವರದಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಮಧ್ಯಾಹ್ನ 3 ಗಂಟೆಗೆ ಭಟ್ಕಳದಲ್ಲಿ ಪಾದಯಾತ್ರೆ ಹೊರಟು ಸಂಜೆ 5 ಗಂಟೆಗೆ ಭಟ್ಕಳದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಕೇಂದ್ರ ಮಂತ್ರಿ ಅನಂತ ಕುಮಾರ್ ಹೆಗಡೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಹಾಗೂ ಕೊಡಗಿನ ಕುಶಾಲನಗರ ದಿಂದ ಸಂಸದ ನಳಿನ್ ಕುಮಾರ್ ಹಾಗೂ ಸಂಸದ ಪ್ರತಾಪ್ ಸಿಂಗ್ ಅವರ ನೇತೃತ್ವದಲ್ಲಿ ಮಂಗಳೂರು ಚಲೋ ಪಾದಯಾತ್ರೆ ಹೊರಡಲಿದೆ. ಮಾರ್ಚ್ 6ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಜ್ಯೋತಿ ಸರ್ಕಲ್ ದಿಂದ ಕೇಂದ್ರ ಮೈದಾನದೆಡೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಎರಡೂ ಕಡೆಯಿಂದ ಮಂಗಳೂರಿಗೆ ಆಗಮಿಸುವ ಪಾದಯಾತ್ರೆಯು 200 ಕಿಲೋಮೀಟರ್ ದೂರ ಕ್ರಮಿಸಲಿದೆ. ಸಮಾಜ ವಿದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ದೇಶದ್ರೋಹಿ ಸಂಘಟನೆಗಳಾದ ಪಿಎಫ್ಐ ಹಾಗೂ ಎಸ್ ಡಿ ಪಿ ಐ ಯನ್ನು ನಿಷೇಧಿಸಬೇಕು. ರಾಜ್ಯದಲ್ಲಿ ಹಿಂದೂಗಳ ಮೇಲಾಗಿರುವ ಅನೇಕ ಹತ್ಯೆ ಹಾಗೂ ಹಲ್ಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು. ಸಮಾಜ ಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ರಾಷ್ಟ್ರವ್ಯಾಪಿ ಗಮನ ಸೆಳೆಯಲು ಈ ಈ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆಯನ್ನು ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದೆ ಎಂದರು.
ರಾಜ್ಯದ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ಮೂರು ತಿಂಗಳ ಅವಧಿಯಲ್ಲಿ 400 ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ಹಿಂದೆ ಪಡೆದಿದೆ. ಇಲ್ಲಿಯವರೆಗೂ 900 ಪಿಎಫ್ಐ ಕಾರ್ಯಕರ್ತರ ಮೇಲೆ ಹೊರಿಸಲಾದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂದೆ ಪಡೆದಿದೆ. ಸಚಿವ ರಮಾನಾಥ್ ರೈ ಹಿಂದೂ ಕಾರ್ಯಕರ್ತರ ಮೇಲೆ ಗುಂಡು ಹಾರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ನೀಡುತ್ತಾರೆ. ಎಂದ ಅವರು ಒಂದೇ ರೀತಿಯಲ್ಲಿ ರಾಜ್ಯದ 16 ಹಿಂದೂ ಕಾರ್ಯಕರ್ತ ರನ್ನು ಕಗ್ಗೊಲೆ ಮಾಡಲಾಗಿದೆ. ಸಚಿವ ಯು ಟಿ ಖಾದರ್ ರೊಂದಿಗೆ ಕೊಲೆಗಡುಕರು ಫೋಟೋ ತೆಗೆಸಿಕೊಳ್ಳುತ್ತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಮ್ಮದ್ ನಲಪಾಡ್ ರಂತಹ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಹೆಗಲ ಮೇಲೆ ಕೈಹಾಕಿ ಹತ್ತತ್ತು ಪೋಟೋ ತೆಗೆದುಕೊಳ್ಳುತ್ತಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಪರಾಧ ಕೃತ್ಯಗಳಿಗೆ ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಪಾದಿಸಿದರು.
ಘಟ್ಟದ ಮೇಲಿನ ತಾಲೂಕುಗಳಾದ ಯಲ್ಲಾಪುರ, ದಾಂಡೇಲಿ, ಹಳಿಯಾಳ, ಜೋಯಿಡಾ, ಮುಂಡಗೋಡದ ಬಿಜೆಪಿ ಕಾರ್ಯಕರ್ತರು ಸಂತೋಷಜಿ ಅವರ ಮಾರ್ಗದರ್ಶನದಲ್ಲಿ ಅಂಕೋಲಾಕ್ಕೆ ತೆರಳಿ ಅಲ್ಲಿಂದ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 6ರಂದು ನಡೆಯುವ ಮಂಗಳೂರು ಚಲೋ ಜನಸುರಕ್ಷ ಯಾತ್ರೆ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ನರಸಿಂಹ ಕೋಣೆಮನೆ, ಬಸವರಾಜ ಓಶೀಮಠ ಮುಂಡಗೋಡ, ಉಮೇಶ ಭಾಗವತ, ಟಿ ಅರ್ ಹೆಗಡೆ, ಸದಾಶಿವ ಚಿಕ್ಯಾನಮನೆ, ಧೀರಜ ತಿನೇಕರ, ಪ್ರಸಾದ ಹೆಗಡೆ ಮುಂತಾದವರಿದ್ದರು.