ಕಾರವಾರ: ಹೋಳಿ ಹಬ್ಬಕ್ಕೆ ನಗರ ರಂಗೆದ್ದಿದೆ. ಬಹುತೇಕ ಅಂಗಡಿಗಳಲ್ಲಿ ರಂಗು ರಂಗಿನ ಬಣ್ಣಗಳು, ಮುಖವಾಡ, ಪಿಚಕಾರಿಗಳೇ ಕಣ್ಸೆಳೆಯುತ್ತಿವೆ. ಶುಕ್ರವಾರ ನಡೆಯುವ ಹೋಳಿ ಹಬ್ಬಕ್ಕೆ ನಗರದಲ್ಲಿನ ಅಂಗಡಿ ಮಾಲೀಕರು ಬಗೆ ಬಗೆಯ ಬಣ್ಣಗಳನ್ನು ಗ್ರಾಹಕರಿಗಾಗಿ ಕಾಯ್ದಿರಿಸಿದ್ದಾರೆ.

ನಗರದ ಶಿವಾಜಿ ವೃತ್ತ, ಸವಿತಾ ವೃತ್ತ, ಗಾಂಧಿ ಮಾರುಕಟ್ಟೆಯ ರಸ್ತೆಯಲ್ಲಿರುವ ಅಂಗಡಿಗಳಲ್ಲಿ ತಾತ್ಕಾಲಿಕವಾಗಿ ಪಿಚಕಾರಿ ಹಾಗೂ ಬಣ್ಣದ ಮಳಿಗೆಗಳು ತೆರೆದುಕೊಂಡಿವೆ. ರಾಕ್ಷಸ, ಸ್ತ್ರೀ, ಕರಡಿ, ನಾರದ, ಈಶ್ವರ, ಭೂತ, ಹುಲಿ, ಬೆಕ್ಕು ಹೀಗೆ ವಿವಿಧ ಮುಖವಾಡಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಹರ್ಬಲ್ ಬಣ್ಣಗಳು: ನಗರದ ಮಳಿಗೆಗಳಲ್ಲಿ ವಿಶೇಷವಾಗಿ ಈ ಬಾರಿ ಹರ್ಬಲ್ ಬಣ್ಣಗಳು ಬಂದಿವೆ. ಈ ಬಣ್ಣಗಳು ಹೆಚ್ಚು ಅಪಾಯಕಾರಿ ಅಲ್ಲ. ಜತೆಗೆ ಇದನ್ನು ಬೇಗನೆ ತೊಳೆದುಕೊಳ್ಳ ಬಹುದಾಗಿದೆ ಎನ್ನುವುದು ಮಾರಾಟಗಾರರ ಅಭಿಪ್ರಾಯವಾಗಿದೆ.

RELATED ARTICLES  ಕರ್ಕಿಯಲ್ಲಿ ಕಳ್ಳರ ಕೈಚಳಕ : ಸ್ಟುಡಿಯೋಗೆ ಬಿತ್ತು ಕನ್ನ.

‘ಮುಖವಾಡಗಳು ₹ 20ರಿಂದ ₹ 200ಕ್ಕೆ ಮಾರಾಟವಾದರೆ, ಬಣ್ಣದ ಪೊಟ್ಟಣಗಳು ₹10, ₹15 ಹಾಗೂ ಪಿಚ್ಕಾರಿಗಳು ₹25ರಿಂದ ₹130ರ ವರೆಗೆ ದರ ಹೊಂದಿದೆ. ಮುಖವಾಡಕ್ಕಿಂತ ಪಿಚಕಾರಿ, ಬಣ್ಣಗಳೇ ಹೆಚ್ಚು ಮಾರಾಟವಾಗುತ್ತಿವೆ. ಆದರೂ ವ್ಯಾಪಾರ ಸಾಮಾನ್ಯವಾಗಿದೆ’ ಎನ್ನುತ್ತಾರೆ ಬಣ್ಣದ ವ್ಯಾಪಾರಿ ಸುರೇಶ ಭಟ್.

ಗ್ರಾಮೀಣ ಹಬ್ಬ: ಹೋಳಿ ಈ ಭಾಗದಲ್ಲಿ ಗ್ರಾಮೀಣ ಹಬ್ಬ. ಇದರ ನಿಮಿತ್ತ ನಡೆಯುವ ಸುಗ್ಗಿ ಕುಣಿತದ ಹಿಗ್ಗು ಜಿಲ್ಲೆಯಾದ್ಯಂತ ಈಗ ಪಸರಿಸಿದೆ. ಗುರುವಾರ ಹೋಳಿ ಹುಣ್ಣಿಮೆಯಲ್ಲಿ ಕಾಮದಹನ ನಡೆಯಲಿದ್ದು, ಶುಕ್ರವಾರ ಸಂಭ್ರಮದ ಹೋಳಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆದಿದೆ.

RELATED ARTICLES  ಶ್ರೀ ಶ್ರೀ ಮುರುಘರಾಜೇಂದ್ರ ಸ್ವಾಮಿಗಳಿಗೆ 'ಗೋಕರ್ಣ ಗೌರವ'

ಕರಾವಳಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಹಾಲಕ್ಕಿ ಒಕ್ಕಲಿಗರು, ಗುನಗಿ, ಅಂಬಿಗರು, ಖಾರ್ವಿ, ಗಾಬಿತ್ ಮೊದಲಾದ ಸಮುದಾಯಗಳ ಮನೆಗಳಲ್ಲಿ ಸುಗ್ಗಿ ಕುಣಿತ ಪ್ರಾರಂಭಗೊಂಡಿದೆ. ಫಾಲ್ಗುಣ ಶುದ್ಧ ದಶಮಿಯಂದು ಆರಂಭಿಸಿ, ಹೋಳಿ ಹುಣ್ಣಿಮೆಯ ದಿನ ಕುಣಿತವನ್ನು ಕೊನೆಗೊಳಿಸುತ್ತಾರೆ.

ಮನೆ ಮನೆ ಭೇಟಿ:  ನಗರ ಪ್ರದೇಶಗಳಲ್ಲೂ ಬಣ್ಣದ ತುರಾಯಿ ಕಟ್ಟಿಕೊಂಡು, ವಿವಿಧ ವೇಷಾಧಾರಿಯಾಗಿ ಕಲಾವಿದರು ಮನೆ ಮನೆಗೆ ತೆರಳಿ ಜಾನಪದ ಶೈಲಿಯಲ್ಲಿ ಹಾಡಿ ಕುಣಿದು, ಕಲಾಪ್ರೇಮಿಗಳನ್ನು ರಂಜಿಸುತ್ತಿದ್ದಾರೆ. ಬಳಿಕ ಅವರು ನೀಡಿದ ಕಾಣಿಕೆಯನ್ನು ಸ್ವೀಕರಿಸುತ್ತಿದ್ದಾರೆ. ಅನಾದಿ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬಂದಿದೆ. ಈಗಾಗಲೇ ವೇಷಧಾರಿಗಳ ದಂಡು ನಗರದಾದ್ಯಂತ ತಿರುಗಾಟ ನಡೆಸುತ್ತಿದೆ.