ಭಟ್ಕಳ: ತಾಲೂಕಾ ಒಂಭತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಧರ ಶೇಟ್ ಶಿರಾಲಿ ಬಹುಮುಖ ಪ್ರತಿಭೆಯ ಸಾಹಿತಿಯಾಗಿದ್ದಾರೆ. ಕೇವಲ ಕಾವ್ಯ, ಕಥೆ, ಲೇಖನಗಳಲ್ಲಷ್ಟೇ ಸೀಮಿತವಾಗದ ಪ್ರತಿಭೆ ಅವರದ್ದು. ಅವರು ಉತ್ತಮ ಚಿತ್ರಕಲಾವಿದರು. ವ್ಯಂಗ್ಯ ಚಿತ್ರಕಾರರೂ, ಚುಕ್ಕಿ ಚಿತ್ರಕಲಾವಿದರೂ, ನಾಟಕಕಾರರೂ, ಸಂಘಟನಾಕಾರರೂ ಕಾರ್ಯಕ್ರಮ ನಿರೂಪಕರೂ ಆಗಿ ಜನಮನ್ನಣೆಗಳಿಸಿದ್ದಾರೆ.
1971ರ ನವಂಬರ್ 21 ರಂದು ಚಿತ್ರಾಪುರದಲ್ಲಿ ಜನಿಸಿದ ಶ್ರೀಧರ ಶೇಟರ ತಂದೆ ದಿ|| ಗಣೇಶ ಕೃಷ್ಣ ಶೇಟ್ ಮತ್ತು ತಾಯಿ ದಿ|| ರತ್ನಾಬಾಯಿ. ಬಡ ಮಧ್ಯಮ ವರ್ಗದಲ್ಲಿ ಜನಿಸಿದ ಇವರು ಬಾಲ್ಯದ ಬಡತನ, ಅಸಹಾಯಕತೆ ಮತ್ತು ಕೀಳರಿಮೆಗಳಿಂದಾಗಿ ಸಾಹಿತ್ಯದತ್ತ ಒಲವು ಬೆಳೆಸಿಕೊಂಡರು. ಇವರ ತಂದೆ ಕುಲಕಸುಬಾದ ಚಿನ್ನದ ಕೆಲಸ ಮತ್ತು ಅಡಿಕೆ ವ್ಯಾಪಾರದ ಮೂಲಕ ಕುಟುಂಬದ ತುತ್ತಿನ ಚೀಲ ತುಂಬುತ್ತಿದ್ದರು. ನಾಲ್ವರು ಸಹೋದರರು ಮತ್ತು ಐವರು ಸಹೋದರಿಯರ ದೊಡ್ಡ ಕುಟುಂಬ ಇವರದ್ದು. ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ ಇವರ ತಂದೆ ಮತ್ತು ಚೌತಿಯ ಸಂದರ್ಭದಲ್ಲಿ ಗಣಪತಿಯ ಚಿತ್ರ ರಚಿಸುತ್ತಿದ್ದ ಇವರ ತಾಯಿಯ ತಂದೆಯವರ ಗುಣ ರಕ್ತಗತವಾಗಿ ಇವರಿಗೆ ಬಂದಿದೆ. ಇವರ ಕುಟುಂಬದಲ್ಲಿ ಬೇರೆ ಯಾರೂ ಸಾಹಿತ್ಯ ಅಥವಾ ಕಲೆಯ ಆರಾಧಕರಿಲ್ಲ.
ಇವರ ಪ್ರಾಥಮಿಕ ಶಿಕ್ಷಣ ಚಿತ್ರಾಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಆನಂದಾಶ್ರಮ ವಿದ್ಯಾಮಂದಿರ) ಯಲ್ಲಿ ನಡೆಯಿತು. ಪ್ರೌಢ ಮತ್ತು ಶಿಕ್ಷಕ ತರಬೇತಿ ಶಿಕ್ಷಣವನ್ನು ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಪಡೆದರು. 1992ರ ನವಂಬರ್ 6 ರಂದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಿದ್ಧಾಪುರ ತಾಲೂಕಿನ ವಂದಾನೆಯ ಸಮೀಪದ ಶಿರೂರಿನಲ್ಲಿ ವೃತ್ತಿ ಆರಂಭಿಸಿದರು.
ತಮ್ಮ ಪ್ರೌಢ ಶಿಕ್ಷಣದ ಸಂದರ್ಭದಿಂದಲೇ ಬರೆಯಲು ಪ್ರಾರಂಭಿಸಿದ ಇವರು ಹತ್ತನೇ ತರಗತಿಯಲ್ಲಿದ್ದಾಗ ‘ಮಯೂರ’ ಮಾಸಿಕಕ್ಕೆ ಕಥೆ ಬರೆದು ಕಳುಹಿಸಿದ್ದರು. ಈ ಸಾಹಿತ್ಯದ ಹುಚ್ಚು ಹಿಡಿಯಲು ಅಣ್ಣಂದಿರು ಮತ್ತು ಅಕ್ಕ ವಾಚನಾಲಯದಿಂದ ತರುತ್ತಿದ್ದ ಪತ್ರಿಕೆಗಳೇ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಎಂಟನೇ ತರಗತಿಯಲ್ಲಿದ್ದಾಗ ‘ತರಂಗ’ ವಾರಪತ್ರಿಕೆಯ ವಿಶೇಷಾಂಕದಲ್ಲಿ ಬಂದ ವ್ಯಂಗ್ಯ ಚಿತ್ರಗಳಿಂದ ಆಕರ್ಷಿತರಾಗಿ ವ್ಯಂಗ್ಯ ಚಿತ್ರಗಳನ್ನು ಬರೆಯಲು ಆರಂಭಿಸಿದರು. ಪಿ.ಯು.ಸಿ. ಪ್ರಥಮ ವರ್ಷದಲ್ಲಿದ್ದಾಗಲೇ ‘ಕಥೆ’ ಎಂಬ ಹನಿಗವಿತೆ ಆಗಿನ ಪ್ರಮುಖ ದಿನ ಪತ್ರಿಕೆಯಾಗಿದ್ದ ‘ಮುಂಗಾರು’ವಿನ ವಾರದ ಮುಂಗಾರುವಿನಲ್ಲಿ ಪ್ರಕಟವಾಗಿತ್ತು.
ಆ ಸಂದರ್ಭದಲ್ಲಿ ಶಿರಾಲಿಯ ಚಿತ್ರಾಪುರದ ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿಡಂಬಾರಿ, ‘ವೈರಸ ಶಿರಾಲಿ’ ಹೆಸರಿನಿಂದ ಬರೆಯುತ್ತಿದ್ದ ಡಾ. ಆರ್. ವಿ. ಸರಾಫ್ ಮತ್ತು ಸಾಹಿತಿ ಡಾ. ಸೈಯದ್ ಜಮೀರುಲ್ಲಾ ಷರೀಫ್‍ರ ಪ್ರಭಾವ ಇವರ ಮೇಲಾಯಿತು.
1988-89ರಲ್ಲಿ ಹೊನ್ನಾವರದಿಂದ ಹೊರಡುತ್ತಿದ್ದ ‘ಆಚಾರ’ ಪತ್ರಿಕೆಯ ವರದಿಗಾರರಾಗಿ ನಂತರ ಆ ಪತ್ರಿಕೆಯ ಉಪ ಸಂಪಾದಕರಾಗಿ ಪತ್ರಿಕೋದ್ಯಮದ ಅನುಭವವನ್ನು ಪಡೆದರು. ಶಿಕ್ಷಕನಾಗಿ ಸೇವೆಗೆ ಸೇರಿದ ಮೇಲೆ ಪತ್ರಿಕೋದ್ಯಮದ ನಂಟು ದೂರವಾದರೂ ಸಾಹಿತ್ಯ ಕ್ಷೇತ್ರ ವಿಶಾಲವಾಯಿತು. ಸಿದ್ಧಾಪುರದ ಕ್ಯಾದಗಿಯಲ್ಲಿದ್ದ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ತಮ್ಮಣ್ಣ ಬೀಗಾರರ ಸಾಂಗತ್ಯದಲ್ಲಿ ತಮ್ಮ ಸಾಹಿತ್ಯ ಮತ್ತು ವ್ಯಂಗ್ಯ ಚಿತ್ರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದರು. ಹಿರಿಯ ಕವಿ, ವಿಮರ್ಶಕ, ಜನಪದ ವಿದ್ವಾಂಸ ವಿ.ಗ. ನಾಯಕರವರ ಮನೆಗೆ ಮುಟ್ಟಿಸಬೇಕು.
ಚಂಪಾರವರ ‘ಸಂಕ್ರಮಣ ಪ್ರಕಾಶನ’ ನೀಡುವ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯಿಂದ ಎರಡು ಬಾರಿ (1996 ಮತ್ತು 2002) ಪುರಸ್ಕøತರಾಗಿರುವ ಹೆಮ್ಮೆ ಇವರದ್ದು. ತಮ್ಮ ಸಾಹಿತ್ಯ ಮತ್ತು ಕವಿತೆಗಳಿಗೆ ರಾಜ್ಯ ಮಟ್ಟದ ಹಲವು ಬಹುಮಾನ ಮತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಭಟ್ಕಳ ತಾಲೂಕಾ ಆಡಳಿತವು ಇವರ ಸಾಹಿತ್ಯ ಸೇವೆಗಾಗಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ನಿರೂಪಣೆಗಾಗಿ ‘ಉತ್ತಮ ಕಾರ್ಯಕ್ರಮ ನಿರೂಪಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ‘ಹಸಿವು ಸಾಯುವುದಿಲ್ಲ’ (ಕವಿತೆಗಳು), ಮಕ್ಕಳ ಕವನಗಳ ಸಂಕಲನ ‘ಬೇಲಿಯ ಹೂವು’, ‘ಬೆರಳ ಸಂಧಿಯಿಂದ’ ಎಂಬ ಹನಿಗವಿತೆಗಳ ಸಂಕಲನ ಪ್ರಕಟವಾಗಿ ವಿಮರ್ಶಕರ ಮತ್ತು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮ ನಿರೂಪಣೆಯ ಕುರಿತಾದ ‘ಮೈಕ್-ಮಂತ್ರ’ , ಚಟುಕುಗಳ ಸಂಕಲನ ‘ಮಲ್ಲಿಗೆ ದಂಡೆ’ , ಭಾವಗೀತೆಗಳ – ‘ಭಾವಯಾನ’ ಮುದ್ರಣಕ್ಕೆ ಸಿದ್ಧವಾಗಿವೆ. ನೂರಾರು ಚುಟುಕುಗಳು, ಕವಿತೆ, ಲೇಖನಗಳು ಇವರ ಲೇಖನಿಯಿಂದ ಮೂಡಿಬಂದಿವೆ.
ಚಿತ್ರಕಲಾವಿದರಾಗಿ : ಹೈಸ್ಕೂಲು ದಿನಗಳಿಂದ ಚಿತ್ರ ರಚಿಸುತ್ತಾ ಬಂದಿರುವ ಶ್ರೀಧರ ಶೇಟ್‍ರವರು ಹಲವು ಪ್ರದರ್ಶನಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. ಜಲವರ್ಣಗಳನ್ನು ಉಪಯೋಗಿಸಿ ಚಿತ್ರ ರಚಿಸುತ್ತಾ ಬಂದಿರುವ ಇವರು ಕಲಾಕೃತಿಗಳು ಜನಪ್ರಿಯತೆಯನ್ನು ಪಡೆದಿವೆ. ‘ನೋಡಿ ಕಲಿ, ಮಾಡಿ ತಿಳಿ’ ಎಂಬ ತತ್ವದ ಆಧಾರದ ಮೇಲೆ ಇವರ ಹವ್ಯಾಸಗಳು ಅಭಿವೃದ್ಧಿಯಾದವು.
ವ್ಯಂಗ್ಯಚಿತ್ರಕಾರನಾಗಿ : ಭಟ್ಕಳ ತಾಲೂಕಿನ ಪ್ರಥಮ ವ್ಯಂಗ್ಯ ಚಿತ್ರಕಾರ’ ಎಂಬ ಹೆಗ್ಗಳಿಕೆಯು ಇವರದ್ದು. ಎಂಟನೇ ತರಗತಿಯಲ್ಲಿದ್ದಾಗ ‘ತರಂಗ’ವಾರ ಪತ್ರಿಕೆಯ ವಿಶೇಷಾಂಕದ ಪ್ರಭಾವದಿಂದ ಅಂಟಿಕೊಂಡ ಈ ಹುಚ್ಚು ಸಿದ್ಧಾಪುರದಲ್ಲಿ ಶಿಕ್ಷಕವೃತ್ತಿ ಸೇರಿದ ಮೇಲೆ ಇನ್ನಷ್ಟು ವೃದ್ಧಿಸಿತು. ಕಾರಣ ಅಲ್ಲಿಯ ಕ್ಯಾದಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಾಹಿತಿ ಮತ್ತು ವ್ಯಂಗ್ಯ ಚಿತ್ರಕಾರ ತಮ್ಮಣ್ಣ ಬೀಗಾರರ ಸಂಪರ್ಕ. ತೊಂಭತ್ತರ ದಶಕದಲ್ಲಿ ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಇವರ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿದ್ದವು. ಭಟ್ಕಳದ ಪ್ರಥಮ ದಿನ ಪತ್ರಿಕೆ ‘ಭಟ್ಕಳ ಡೈರಿ’ಯ ಸುಂಟರಗಾಳಿ ಅಂಕಣದಲ್ಲಿ ಪ್ರತಿ ದಿನ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿದ್ದವು. ಲಯನ್ಸ್ ಕ್ಲಬ್ ಇವರನ್ನು ಉತ್ತಮ ವ್ಯಂಗ್ಯ ಚಿತ್ರಕಾರ ಎಂದು ಸನ್ಮಾನಿಸಿದೆ.
ಸೃಜನಶೀಲತೆಯ ಗುಚ್ಛ: ಸಾಹಿತ್ಯ, ಸಾಂಸ್ಕøತಿಕ, ರಾಜಕೀಯ ಮತ್ತು ಸಿನೇಮಾ ಮುಂತಾದ ಕ್ಷೇತ್ರದ ಮಹನೀಯರನ್ನು ಇವರು ತಮ್ಮ ಚುಕ್ಕಿ ಚಿತ್ರಗಳಲ್ಲಿ ಸೆರೆ ಹಿಡಿದಿದ್ದಾರೆ. ಪ್ರಾಥಮಿಕ ಹಂತದಿಂದಲೇ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದ ಇವರು ಉತ್ತಮ ನಾಟಕಕಾರರೂ ಆಗಿದ್ದಾರೆ. ವಿನಾಯಕ ಬ್ರಹ್ಮೂರು ನಿರ್ದೇಶನದ ‘ವಿಟಾಮಿನ್ ಎಲ್’ ಕಿರು ಚಿತ್ರಕ್ಕೆ ಶೀರ್ಷಿಕೆ ಗೀತೆ ರಚಿಸಿ ನಟಿಸಿದ್ದಾರೆ.
ಸಂಘಟನೆ : ವಕೀಲರಾದ ಶಂಕರ ನಾಯ್ಕರೊಂದಿಗೆ ಸೇರಿ 1990ರಲ್ಲಿ ಕನ್ನಡ ವಿಚಾರ ವೇದಿಕೆಯನ್ನು ಕಟ್ಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಮತ್ತು ಕೋಶಾಧ್ಯಕ್ಷರಾಗಿ ಕನ್ನಡ ನುಡಿ ಮತ್ತು ಸಾಹಿತ್ಯಕ್ಕೆ ದುಡಿದಿದ್ದಾರೆ. ‘ಹಣತೆ’ ಸಾಹಿತ್ಯಕ – ಸಾಂಸ್ಕøತಿಕ ಸಂಘಟನೆಯ ತಾಲೂಕಾ ಅಧ್ಯಕ್ಷನಾಗಿ ಆಂಗ್ಲಭಾಷಾ ಶಿಕ್ಷಕ ಸಂಘದ ಅಧ್ಯಕ್ಷನಾಗಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕೋಶಾಧ್ಯಕ್ಷನಾಗಿ ಸೇವೆಗೈದಿದ್ದಾರೆ.