ಭಟ್ಕಳ ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಗುರುವಾರದಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ತಾಲೂಕಿನ ಬಂದರ್‍ನಲ್ಲಿರುವ ಖಾರ್ವಿ ಸಮುದಾಯದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯಯಿದ್ದು, ಇವರ ಓಕೋಳಿಯಾಟವನ್ನು ಕಾಣಲು ಜನ ಗುಂಪುಪಾಗಿ ಸೇರುವುದೂ ಒಂದು ವಿಶೇಷ ಎನ್ನಬಹುದು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು ಅತ್ಯಂತ ವಿಶಿಷ್ಠವಾಗಿ ಐದು ದಿನಗಳ ಕಾಲ ಆಚರಿಸಿದ್ದು, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ತಮ್ಮ ಸೀಮಿತವನ್ನು ಕಾಯ್ದುಕೊಂಡು ಹೋಳಿ ಆಚರಿಸಿದ್ದಾರೆ. ಈ ಖಾರ್ವಿ ಸಮಾಜದವರು ವಿಶಿಷ್ಠ ರೀತಿಯಲ್ಲಿ ಹೋಳಿಯನ್ನು ಆಚರಿಸಲಿದ್ದು, ಜಿಲ್ಲೆಯಲ್ಲಿಯೇ ವಿಶಿಷ್ಠತೆಯನ್ನು ಹೊಂದಿದೆ. ಪ್ರತೀ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬದವರು ಹರಕೆಯನ್ನು ಹೊರಲಿದ್ದು, ಹರಕೆಯ ನಿಯಮದಂತೆ ಅವರ ಮನೆಯಿಂದ ಒಂದು ಅಡಿಕೆ ಮರವನ್ನ ಹಬ್ಬದ ದಿನದಂದು ಸಮಾಜದವರೆಲ್ಲರೂ ಸೇರಿ ವಾದ್ಯಗಳೊಂದಿಗೆ ಕುಣಿತಗಳನ್ನು ಹಾಕುತ್ತಾ ಅಡಿಕೆಮರವನ್ನ ಹಾರಿಸುತ್ತಾ ಮೆರವಣಿಗೆಯ ಮೂಲಕ ಬಂದರ್ ಕಡಲತೀರಕ್ಕೆ ತಂದು ಮೆರವಣಿಗೆಯಲ್ಲಿ ವಿಜೃಂಭಣೆಯಿಂದ ಜೈಕಾರ ಹಾಕುತ್ತಾ ಸಾಗುವುದು ಆಕರ್ಷಣೀಯವಾಗಿತ್ತು. ಈ ಮಧ್ಯೆ ವೇಷಧಾರಿಗಳು ಮೆರವಣಿಗೆಯನ್ನು ಆಕರ್ಷಿಸುದುಂಟು. ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು. ತದನಂತರ ಮೆರವಣಿಗೆಯೂ ಬಂದರ್ ಸಮುದ್ರ ತೀರದತ್ತ ಬಂದು ಅಲ್ಲಿ ಹೊಂಡವನ್ನು ತೋಡಿ ಅಡಿಕೆಮರ ನೆಟ್ಟು ಕಾಮದಹನ ಮಾಡಿ ಆ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆಯಿತು.
ತಾಲೂಕಿನ ಮುಠ್ಠಳ್ಳಿ, ಮಣ್ಕುಳಿ, ಮೂಢಭಟ್ಕಳ, ಮುಂಡಳ್ಳಿ, ತಲಾಂದ, ಶಿರಾಲಿ, ಅಳ್ವೇಕೋಡಿ, ಮುರ್ಡೇಶ್ವರದ ಭಾಗಗಳಲ್ಲಿಯೂ ಯುವಕರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈಗಿನ ಯುವ ಸಮಾಜಕ್ಕೆ ಹೋಳಿಯೊಂದು ಮೋಜು ಮಸ್ತಿಯ ಹಬ್ಬವಾಗಿದ್ದು, ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಹಿರಿಯರು ನಡೆಸಿಕೊಂಡ ಬಂದಂತೆ ಕೆಲವು ಆಚರಣೆಗಳು ನಡೆದುಕೊಂಡು ಬಂದಿದ್ದು, ಸಂಪ್ರದಾಯಕ್ಕೆ ಈಗಿನ ಯುವ ಜನತೆಗೆ ಪ್ರಾಮುಖ್ಯತೆಯನ್ನ ನೀಡಿರುವುದು ಗಮನಾರ್ಹ.
ಈ ಹಬ್ಬದ ಸಂಭ್ರಮದ ಬಗ್ಗೆ ನಮ್ಮ ವಾಹಿನಿಯ ಜೊತೆ ಮಾತನಾಡಿದ ಖಾರ್ವಿ ಸಮಾಜದ ಹಿರಿಯ ಮುಖಂಡ ಎನ್.ಡಿ. ಖಾರ್ವಿ “ನಮ್ಮ ಈ ಹೋಳಿ ಹಬ್ಬವು ಜಿಲ್ಲೆಯಲ್ಲಿಯೇ ಪ್ರಸಿದ್ದವಾಗಿದ್ದು, ತಲತಲಾಂತರದಿಂದ ನಡೆಸಿಕೊಂಡು ಬಂದ ಪರಂಪರೆಯನನು ನಾವೆಲ್ಲರೂ ಮುಂದುವರೆಸಿಕೊಂಡು ಬರುತ್ತಿದ್ದೇವೆ. ಐದು ದಿನಗಳ ಕಾಲ ಸಮಾಜದ ಎಲ್ಲರೂ ಸೇರಿ ಸಂಪ್ರದಾಯದ ರೀತಿಯಲ್ಲಿ ಆಚರಿಸುತ್ತೇವೆ. ವಿಶೇಷೆಂದರೆ ಈ ಹೋಳಿಯಲ್ಲಿ ಸಮಾಜದ ಎಲ್ಲರೂ ಭಾಗವಹಿಸಲೇಬೇಕು ಎನ್ನುವ ಪದ್ದತಿಯಿದ್ದು, ಹೋಳಿ ಹಬ್ಬದ ದಿನ ನಮ್ಮ ಸಮಾಜದ ಜನರು ಯಾವುದೇ ಊರಿನಲ್ಲಿ ಕೆಲಸಕ್ಕೆ ಹೋಗಿದರೆ ಅಥವಾ ಕೆಲಸಕ್ಕೆ ಇದ್ದರೆ ರಜೆಯನ್ನು ಮಾಡಿ ಇದರಲ್ಲಿ ಪಾಲ್ಗೊಳ್ಳಲೇಬೇಕು. ಇದು ನಮ್ಮೂರಿನ ಸಂಪ್ರದಾಯವಾಗಿದೆ.” ಎಂದು ಹೇಳಿದರು.
ಒಟ್ಟಾರೆ ಪ್ರತಿವರ್ಷದ ಸಂಭ್ರಮದ ಹೋಳಿ ಹಬ್ಬವೂ ತಾಲುಕಿನಾದ್ಯಂತ ಬಣ್ಣಗಳಿಂದಲೇ ತುಂಬಿದ್ದು, ಯಾವುದೇ ಅಹಿತಕರ ಘಟನೆ ನಡೆಯದೇ ಸುಖಾಂತ್ಯದ ರೀತಿಯಲ್ಲಿ ಹಬ್ಬಕ್ಕೆ ತೆರೆಬಿದ್ದಿದೆ. ಕೆಲವೊಂದು ಪೋಲೀಸರ ಕಣ್ಗಾವಲು ಹಾಕಲಾಗಿತ್ತು.

RELATED ARTICLES  ನಿಧಿಗಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ? : ಘಟನೆ ಕೇಳಿ ಬೆಚ್ಚಿದ ಉತ್ತರ ಕನ್ನಡ.