ಯಲ್ಲಾಪುರ ; ತಾಲ್ಲೂಕಿನ ಕಿರವತ್ತಿ ಗ್ರಾಮದಲ್ಲಿ 5 ಕ್ಕೂ ಹೆಚ್ಚು ಜನ ನಕಲಿ ವೈದ್ಯರುಗಳು ಕಾರ್ಯನಿರ್ವಹಿಸುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ ಈ ನಕಲಿ ವೈದ್ಯರಲ್ಲಿ ಔಷಧಿ ಪಡೆದ ಮಹಿಳೆಯೋರ್ವಳು ಸಾವನ್ನಪ್ಪಿರುವ ಘಟನೆ ವದಂತಿಯಾಗಿ ಹರಡುತ್ತಿದೆ.
ಕಿರವತ್ತಿ ಸಮೀಪದ ಚಿಕ್ಕ ಗ್ರಾಮವೊಂದರ ಹಿಂದುಳಿದ ಮಹಿಳೆ ಈ ನಕಲಿ ವೈದ್ಯರಲ್ಲಿ ಔಷಧಿ ಪಡೆದು ಸಾವನ್ನಪ್ಪಿದವಳಾಗಿದ್ದು, ಮೃತ ಮಹಿಳೆಯ ಕುಟುಂಬದವರು ಹಾಗೂ ಔಷದಿ ನೀಡಿದ ನಕಲಿ ವೈದ್ಯರ ಮಧ್ಯ ಆಕೆಯ ಸಾವಿನ ನಂತರ ಒಪ್ಪಂದವಾಗಿ ಮುಚ್ಚಿ ಹೋಗಿದೆ ಎನ್ನಲಾಗಿದೆ. ಅಲ್ಲದೆ ಇನ್ನೊಬ್ಬ ಮಹಿಳೆ ಗೆ ಔಷಧಿ ನೀಡಿರುವ ಮತ್ತೋರ್ವ ವೈದ್ಯ ಆಕೆಯನ್ನು ನರಕಕ್ಕೆ ತಳ್ಳಿದ್ದಾನೆ ಎನ್ನಲಾಗಿದೆ.
ಆಕೆಯನ್ನು ಕೊನೆಯ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಇನ್ನೊಂದು ಪ್ರಕರಣದಲ್ಲಿ 22 ವರ್ಷದ ಯುವಕನೋರ್ವನಿಗೆ ಮೂತ್ರಪಿಂಡದ ಕಲ್ಲನ್ನು ತೆಗೆಯುತ್ತೇನೆ ಎಂದು ಹೇಳಿ, ಯಾವುದೋ ಔಷಧಿ ನೀಡಿರುವ ನಕಲಿ ವೈದ್ಯನಿಂದಾಗಿ ಯುವಕನ ದೇಹ ಊದಿಕೊಂಡಿದ್ದು, ಆತನು ಕೂಡ ದಿನಗಣನೆ ಪ್ರಾರಂಭಿಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೆಲವು ತಿಂಗಳ ಹಿಂದೆ ಮದನೂರು ಊರಿನ ವ್ಯಕ್ತಿಯೋರ್ವ ಸಾಮಾನ್ಯ ಜ್ವರಕ್ಕೆ ನಕಲಿ ವೈದ್ಯರನ್ನು ಭೇಟಿಯಾಗಿ ಇಂಜೆಕ್ಷನ್ ಪಡೆದಿದ್ದ, ನೋಡುನೋಡುತ್ತಲೇ ಇಂಜೆಕ್ಷನ್ ಮಾಡಿದ್ದ ಜಾಗದಿಂದ ಊದಿಕೊಂಡು ರಕ್ತಸ್ರಾವ ಆರಂಭವಾಗಿದೆ. ಆತನನ್ನು ಊರಿನಿಂದ ಯಲ್ಲಾಪುರದ ಆಸ್ಪತ್ರೆಗೆ ತರುವ ಸಂದರ್ಭದಲ್ಲಿ ಕೊನೆಯುಸಿರೆಳೆದಿದ್ದಾನೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೌಸರ್ ಬಾನು ಅಬ್ದುಲ್ ಸತ್ತಾರ್ ಕಿರವತ್ತಿ. ನಕಲಿ ವೈದ್ಯರಿಂದ ಸಮಸ್ಯೆ ಎದುರಿಸುತ್ತಿರುವ ಮಹಿಳೆ.
ಹತ್ತು ವರ್ಷದ ಹಿಂದೆ ಸಾಮಾನ್ಯ ಜ್ವರಕ್ಕೆ ಇಂಜೆಕ್ಷನ್ ಪಡೆದುಕೊಂಡಿರುವ 20 ವರ್ಷದ ಮಹಿಳೆಯೋರ್ವರು ಕಾಲು ಕೊಳೆತು ಹೋಗಿ ನಾಲ್ಕು ವರ್ಷದಿಂದ ಸೊಂಟಕ್ಕೆ ಶಕ್ತಿ ಇಲ್ಲದೆ ತೆವಳುತ್ತಲೇ ಬದುಕು ಸವೆಸಿದ್ದಳು. ಕಳೆದ ಮೂರು ವರ್ಷದಿಂದ ಸ್ವಲ್ಪ ನಡೆಯುವುದನ್ನು ರೂಢಿ ಮಾಡಿಕೊಂಡಿರುವ ಆಕೆ ಇದೀಗ 30 ವರ್ಷದ ಮಹಿಳೆ ಕೌಸರ್ ಬಾನು ಅಬ್ದುಲ್ ಸತ್ತಾರ, ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾಳೆ, ಪ್ರತಿದಿನ ಆಕೆಯ ಗಾಯಕ್ಕೆ ಡ್ರೆಸ್ಸಿಂಗ್ ಮಾಡುವುದು ಅವಶ್ಯವಾಗಿದೆ. ಅಲ್ಲದೆ ಹುಬ್ಬಳ್ಳಿಯ ಹೈಟೆಕ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಚಿಕಿತ್ಸೆ ಪಡೆಯಬೇಕಾಗಿದ್ದು ತಿಂಗಳಿಗೆ 15 ಸಾವಿರ ರೂಪಾಯಿ ವೆಚ್ಚ ತಗಲುತ್ತಿದೆ. ತನ್ನ ಇಂದಿನ ಸ್ಥಿತಿಗೆ ನಕಲಿ ವೈದ್ಯ ನೀಡಿದ ಇಂಜೆಕ್ಷನ್ ಕಾರಣವಾಗಿದೆ ಎಂದು ದುಃಖದಿಂದ ಹೇಳಿಕೊಳ್ಳುತ್ತಾಳೆ.
ಸಾರ್ವಜನಿಕರ ದೂರಿನ ಮೇರೆಗೆ ಗುರುವಾರ ಕಿರವತ್ತಿ ಗೆ ಯಾವುದೇ ಮುನ್ಸೂಚನೆ ಇಲ್ಲದೆ ಭೇಟಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಸವರಾಜಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ ಇಬ್ಬರೂ ವೈದ್ಯರ ಕ್ಲಿನಿಕ್ ಪರಿಶೀಲಿಸಿದಾಗ ಕ್ಲಿನಿಕ್ ನಡೆಸಲು ಅವಶ್ಯವಿರುವ ಯಾವುದೇ ದಾಖಲೆ ಪತ್ತೆಯಾಗಿಲ್ಲ.
ವೈದ್ಯರ ನಿರ್ಲಕ್ಷದಿಂ ಮಹಿಳೆಯೋರ್ವಳ ತೊಡೆ ಸೊಂಟಕ್ಕೆ ಗಂಭೀರವಾಗಿ ಗಾಯವಾಗಿರುವುದು.
ಬೆಳಿಗ್ಗೆ ಕಿರವತ್ತಿಯ ಗೋಪಿಚಂದ ಯಲ್ಲಪ್ಪ ಪೋಳ ಎಂಬುವವರು ನಡೆಸುತ್ತಿದ್ದ ಜೆ.ಡಿ ಕ್ಲಿನಿಕ್ ಗೆ ಭೇಟಿ ನೀಡಿರುವ ತಂಡ, ಗೋಪಿಚಂದ್ ಪೋಳ ಕೆಪಿಎಂಇ ನಿಯಮಾನುಸಾರ ಅಧಿಕೃತವಾಗಿ ಯಾವುದೇ ದಾಖಲೆ ಇಲ್ಲದೇ ಅನಧಿಕೃತವಾಗಿ ಆಸ್ಪತ್ರೆ ನಡೆಸುವುದು ಕಂಡು ಬಂದಿದೆ. ಕೆಲವೊಂದು ನಕಲಿ ದಾಖಲೆಗಳನ್ನು ಗೋಡೆಗೆ ಅಂಟಿಸಿರುವ ಗೋಪಿಚಂದ್ ಅವರ ಟೇಬಲ್ ಮೇಲೆ ಟ್ಯಾಬ್ಲೆಟ್ ಸ್ಟ್ರೀಫ್ ಹಾಗೂ ಸಲೈನ್ ಹಚ್ಚಿರುವ ಬಾಟಲುಗಳು ಕಂಡು ಬಂದಿವೆ. ಈ ಕುರಿತು ತನಿಖಾ ತಂಡವು ಗೋಪಿಚಂದ ಪೋಳ ಅವರನ್ನು ವಿಚಾರಿಸಿದಾಗ ಎಲ್ಲ ದಾಖಲೆಗಳು ನಮ್ಮಲ್ಲಿವೆ ಎಂದು ಹೇಳಿದ ಅವರು ಯಾವುದೇ ದಾಖಲೆಯನ್ನು ತಂಡಕ್ಕೆ ತೋರಿಸುವಲ್ಲಿ ವಿಫಲರಾಗಿದ್ದಾರೆ. ಗುರುವಾರ ಸಂಜೆ ಹೊತ್ತಿಗೆ ಕ್ಲಿನಿಕ್ ಅನ್ನು ಮುಚ್ಚುವಂತೆ ತಂಡವು ತಾಕೀತು ಮಾಡಿದೆ.
ಭಗವಾನ್ ಗುಂಡ್ರೆ ಎಂಬುವವರ ಶಾಂತಿ ಕ್ಲಿನಿಕ್ ನಲ್ಲಿ ಪರಿಶೀಲಿಸಿದಾಗ ನಂದಕಿಶೋರ ತುಕಾರಾಮ ರೋಕಡೆ ಎಂಬುವವರು ಕ್ಲಿನಿಕ್ ನಲ್ಲಿ ವೈದ್ಯರಂತೆ ಕೆಲಸ ಮಾಡುವುದು ಕಂಡು ಬಂದಿದೆ. ಇಕ್ಕಟ್ಟಾದ ಸ್ಥಳದಲ್ಲಿ ಕ್ಲಿನಿಕ್ ಔಷಧಿ ಮತ್ತು ಸಿರಂಜಗಳನ್ನು ಬಿಟ್ಟಿರುವುದು ತಂಡಕ್ಕೆ ಕಂಡುಬಂದಿದೆ. ಈ ಕುರಿತು ಭಗವಾನ ಗುಂಡ್ರೆ ಹಾಗೂ ನಂದಕಿಶೋರ ರೋಕಡೆ ಅವರನ್ನು ವಿಚಾರಣೆ ನಡೆಸಿದಾಗ ಕೆಪಿಎಂಇ ನಿಯಮಾನುಸಾರ ಯಾವುದೇ ದಾಖಲೆಗಳು ಒದಗಿಸಿಲ್ಲ. ಅಲ್ಲದೆ ಗುಂಡ್ರೆ ಮತ್ತು ರೋಕಡೆ ಒಬ್ಬರಿಗೊಬ್ಬರು ಬೆರಳು ಮಾಡಿ ತೋರಿಸಿ ವೈದ್ಯರು ಎಂದು ಹೇಳಿಕೊಂಡಿದ್ದಾರೆ. ನಂದಕಿಶೋರ ರೋಕಡೆ ಶುಶ್ರುಕರ ತರಬೇತಿ ಪಡೆದ ದಾಖಲೆ ತೋರಿಸಿದ್ದು, ಇವರಿಗೆ ಕ್ಲಿನಿಕ್ ನಡೆಸಲು ಯಾವುದೇ ಅರ್ಹತೆ ಇಲ್ಲದಿರುವುದರಿಂದ ಸಂಜೆಯ ಒಳಗೆ ಕ್ಲಿನಿಕ್ ಮುಚ್ಚುವಂತೆ ತಂಡವು ತಾಕೀತು ಮಾಡಿದೆ.
ಕಿರುವತ್ತಿಯಲ್ಲಿ ಒಬ್ಬರು ವೈದ್ಯರನ್ನು ಹೊರತುಪಡಿಸಿದರೆ ಉಳಿದೆಲ್ಲ ವೈದ್ಯ ವೃತ್ತಿ ನಡೆಸುವವರು ಅನಧಿಕೃತವಾಗಿ ಆಸ್ಪತ್ರೆ ನಡೆಸುತ್ತಿರುವುದಾಗಿ ಸ್ಥಳೀಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಅನಕ್ಷರಸ್ಥರು, ಸಾಮಾನ್ಯ ಜ್ಞಾನವನ್ನು ಹೊಂದದ ಮುಗ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅದರ ದುರುಪಯೋಗ ಪಡೆಯುವ ನಕಲಿ ವೈದ್ಯರು ಅವರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ನಕಲಿ ವೈದ್ಯರಿಂದ ಸಮಸ್ಯೆ ಎದುರಿಸುತ್ತಿರುವ ಜನರನ್ನು ಭೇಟಿ ಮಾಡಿ ಅವರಿಂದ ವಿವರವನ್ನು ಕಲೆಹಾಕುವ ಕೆಲಸವನ್ನೂ ಆರೋಗ್ಯ ಇಲಾಖೆ ಮಾಡಬೇಕಾಗಿದೆ. ಅಲ್ಲದೆ ಈ ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಕಲಿ ವೈದ್ಯರ ಅಚಾತುರ್ಯದಿಂದ ಯಾರಿಗಾದರೂ ಹಾನಿಯಾದಲ್ಲಿ ಮಧ್ಯಪ್ರವೇಶಿಸುವ ಕೆಲವು ಮರಿ ರಾಜಕಾರಣಿಗಳು ವೈದ್ಯರು ಮತ್ತು ವೈದ್ಯರ ಎಡವಟ್ಟಿನಿಂದ ನೊಂದ ವ್ಯಕ್ತಿಗಳ ಮದ್ಯ ಒಪ್ಪಂದ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆ ವೈದ್ಯಕೀಯ ಸಂಘಗಳಿಗೆ ದೂರು ಸಲ್ಲಿಸಿದಂತೆ ತಡೆಯೊಡ್ಡುತ್ತಿದ್ದಾರೆ.