ಸ್ನೇಹ ಯುವಕ ಸಂಘ ತೊಪ್ಪಲಕೇರಿ, ಕರ್ಕಿ ಇವರ ಆಶ್ರಯದಲ್ಲಿ ಹೊನ್ನಾವರ, ಭಟ್ಕಳ ಮತ್ತು ಕುಮಟಾ ತಾಲೂಕಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ ಪಂದ್ಯಾವಳಿಯನ್ನು ಹೊನ್ನಾವರ ತಾಲೂಕಿನ ಕರ್ಕಿಯ ತೊಪ್ಪಲಕೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾವಳಿಯ ಸಭಾ ಕಾರ್ಯಕ್ರಮವನ್ನು ರಾಜ್ಯ ಕಬಡ್ಡಿ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ತೊಪ್ಪಲಕೇರಿಯ ಸ್ನೇಹ ಯುವಕ ಸಂಘದವರು ಅತ್ಯಂತ ಉತ್ಸಾಹದೊಂದಿಗೆ ಅಚ್ಚುಕಟ್ಟಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿರುತ್ತಾರೆ. ಕ್ರೀಡಾ ಚಟುವಟಿಕೆಗಳು ಸಾಂಸ್ಕøತಿಕ ಕಾರ್ಯಕ್ರಮಗಳಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ ಎಂಬ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.
ಕ್ರೀಡಾಂಗಣವನ್ನು ಉದ್ಘಾಟಿಸಿದ ವೆಂಕಟ್ರಮಣ ಹೆಗಡೆ ಅವರು ಎಲ್ಲ ತಂಡಗಳಿಗೆ ಶುಭ ಕೋರಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಸ್ನೇಹ ಯುವಕ ಸಂಘದವರಿಂದ ಮೂರು ತಾಲೂಕುಗಳನ್ನೊಳಗೊಂಡ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಯುವಶಕ್ತಿ ಅದ್ಭುತವಾದದ್ದು. ಈ ಶಕ್ತಿಯನ್ನು ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರಲು ಸಾಧ್ಯ. ಯುವಕರು ಸ್ವಾವಲಂಬನೆಯ, ಸಾಮಾಜಿಕ ಕಳಕಳಿಯ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಗಳು ನಮ್ಮ ಬದುಕಿಗೆ ಅಗತ್ಯ. ಒತ್ತಡಮಯ ಜೀವನದಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಉತ್ತಮ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಒದಗಿಸುತ್ತವೆ. ಇಂತಹ ಕ್ರೀಡಾ ಚಟುವಟಿಕೆಗಳು ನಡೆದಾಗ ನಮ್ಮೊಳಗಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಹಾಗೂ ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕರ್ಕಿ ಗ್ರಾ. ಪಂ. ಸದಸ್ಯೆ ಸಾಧನಾ ಎಸ್. ನಾಯ್ಕ, ಕರ್ಕಿ ಗ್ರಾ. ಪಂ. ಸದಸ್ಯ ಮಹಾಬಲೇಶ್ವರ ಮೇಸ್ತ, ಕರ್ಕಿ ಗ್ರಾ. ಪಂ. ಸದಸ್ಯೆ ಮಾದೇವಿ ಎನ್. ಮುಕ್ರಿ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.