ತುಮಕೂರು: ಬಿಹಾರ, ಉತ್ತರಪ್ರದೇಶ ಮಾದರಿಯಲ್ಲೇ ರಾಜ್ಯದಲ್ಲೂ ಹೆಣ್ಣುಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರವೆಸಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾವಗಡ ತಾಲೂಕು ನಿಡಗಲ್ಲು ಗ್ರಾಮದಲ್ಲಿ ಅಸಹಾಯಕ ಮಹಿಳೆಯರನ್ನು ಗೂಂಡಾಗಳು ಅಪಹರಿಸಿ ಅತ್ಯಾಚಾರವೆಸಗಿರುವ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಪ್ರಕರಣ ನಡೆಯುತ್ತಲೇ ಇವೆ. ವಿವಾಹಿತರು, ವಿಧವೆಯರು ಹಾಗೂ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಇಂತಹ ಕೃತ್ಯ ಎಸಗುತ್ತಿರುವ ಗೂಂಡಾಗಳು ಸ್ಥಳೀಯರನ್ನು ಭಯದಲ್ಲಿಟ್ಟಿದ್ದಾರೆ. ಮಾಜಿ ಶಾಸಕರೊಬ್ಬರು ಈ ಗೂಂಡಾಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದ ನಾಗಲಕ್ಷ್ಮೀಬಾಯಿ, ಫೆ.28ಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಇಂತಹ ಗಂಭೀರ ವಿಷಯ ಬೆಳಕಿಗೆ ಬಂತು ಎಂದರು.
ಪಾತ್ರೆ ತೊಳೆಯುತ್ತಿದ್ದ ಅಂಗನವಾಡಿ ಶಿಕ್ಷಕಿಯೊಬ್ಬಳನ್ನು ಪತಿಯ ಎದುರೇ ಎಳೆದಾಡಿ ನಡುಬೀದಿಯಲ್ಲೇ ರೇಪ್ ಮಾಡುವುದಾಗಿ ಹೆದರಿಸಿದ್ದಾರೆ. ಗ್ರಾಮದ ಮಹಿಳೆಯರನ್ನು ಹೊತ್ತೊಯ್ದು 4-5 ದಿನದ ಬಳಿಕ ವಾಪಸ್ ಬಿಡುತ್ತಿದ್ದು, ಸಂತ್ರಸ್ತರ ರಕ್ಷಣೆಗೆ ಪೊಲೀಸರು ಬರುತ್ತಿಲ್ಲ. ಠಾಣೆಗೆ ದೂರು ನೀಡಲು ಹೋದರೆ ಸ್ವೀಕರಿಸುತ್ತಿಲ್ಲ. ಈ ವಿಷಯ ಬಾಯಿಬಿಟ್ಟರೆ ವಂಶ ಸರ್ವನಾಶ ಮಾಡುತ್ತೇವೆ ಎಂಬ ಗೂಂಡಾಗಳ ಬೆದರಿಕೆಯಿಂದ ಹೆಣ್ಣುಮಕ್ಕಳು ಸತ್ಯ ಹೇಳಲು ಹೆದರುತ್ತಿದ್ದಾರೆ.
ಇದೇ ರೀತಿ ಮುಂದುವರಿದರೆ ಪಾವಗಡ ತಾಲಿಬಾನ್ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಮಕೃಷ್ಣ, ಸುನೀಲ್, ದೇವರಾಜ್, ಶಾರದಮ್ಮಎಂಬುವವರು ಈ ಕೃತ್ಯ ಎಸಗಿದ್ದು, ಗೂಂಡಾ ಕಾಯ್ದೆ ಅಡಿ ಆರೋಪಿಗಳನ್ನು ಬಂಧಿಸುವಂತೆ ಎಸ್ಪಿಗೆ ತಿಳಿಸಲಾಗಿದೆ ಎಂದು ತಿಳಿಸಿದರು