ಕುಮಟಾ: ರಾಜ್ಯದಲ್ಲಿ ಹಿಂದುತ್ವ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ, ಅವರ ಮೇಲಿನ ಹಲ್ಲೆಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಿಂದ ಇಂದು ಆರಂಭವಾಗಿದ್ದು ಮಾ.6ಕ್ಕೆ ಮಂಗಳೂರು ಚಲೋ ಸಮಾವೇಶದೊಂದಿಗೆ ಯಾತ್ರೆ ಮುಕ್ತಾಯವಾಗಲಿದೆ.
ಕುಶಾಲನಗರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಯಾತ್ರೆಗೆ ಚಾಲನೆ ನೀಡಿದರು. ಅಂಕೋಲಾದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿ ಯಾತ್ರೆ ಪ್ರಾರಂಭಿಸಿದರು. ಅಲ್ಲಿಂದ ಹೊರಟ ಯಾತ್ರೆಯ ನೇತೃತ್ವವನ್ನು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಉಡುಪಿ– ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ವಹಿಸಿದ್ದು ಇಂದು ಮಧ್ಯಾಹ್ನ 4 ಗಂಟೆಗೆ ಕುಮಟಾದಲ್ಲಿ ಯಾತ್ರೆ ನಡೆಯಿತು.
ಕುಮಟಾದ ಬಿಜೆಪಿ ಕಾರ್ಯಾಲಯದಿಂದ ಮಾಸ್ತಿಕಟ್ಟೆ ಮಾರ್ಗವಾಗಿ ಸುಭಾಷ್ ರಸ್ತೆ ಮೂಲಕ ಗಿಬ್ ಸರ್ಕಲ್ ವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ಬಿಜೆಪಿ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಸಚಿವ ಅನಂತ್ ಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಪ್ರಮುಖ ನಾಗರಾಜ ನಾಯಕ ತೊರ್ಕೆ, ಸೂರಜ ನಾಯ್ಕ ಸೋನಿ, ಮಾಜಿ ಶಾಸಕ ದಿನಕರ ಶೆಟ್ಟಿ, ಸುಬ್ರಾಯ ವಾಳ್ಕೆ,ಯಶೋಧರಾ ನಾಯ್ಕ ಹಾಗೂ ಇನ್ನಿತರ ಪ್ರಮುಖರು ಇದ್ದರು.
ಸಚಿವ ಅನಂತ್ ಕುಮಾರ ಹೆಗಡೆ ಮಾತನಾಡಿ ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಒಂದು ಕೋಮಿನ ತುಷ್ಟೀಕರಣ ಮಾಡುತ್ತಿದ್ದೆ. ಪಿಎಫ್ಐ ಕಾರ್ಯಕರ್ತರ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿದೆ. ಗೋಹಂತಕರು ಮತ್ತು ಗೋವುಗಳ ಕಳ್ಳಸಾಗಣೆ ಮಾಡುವವರಿಗೆ ಉತ್ತೇಜನ ನೀಡಿದೆ. ಇದರಿಂದಾಗಿ ನಾಲ್ಕು ವರ್ಷಗಳಲ್ಲಿ 15 ಮಂದಿ ಹಿಂದುತ್ವ ಪರ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಗಳು ನಡೆದಿವೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’ ಎಂದು ಆರೋಪಿಸಿದರು.