ಕಾರವಾರ:ಪರಿಸರ ಮಾಲಿನ್ಯವನ್ನು ತಡೆಗಟ್ಟುಲು ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಹೆಚ್ಚು ಬಳಸದೇ ಸರ್ಕಾರಿ ಸಾರಿಗೆ ಬಸ್‍ಗಳಲ್ಲಿ ಸಂಚರಿಸುವುದರಿಂದ ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಅವರು ಹೇಳಿದರು.
ಅವರು ಶನಿವಾರ ಹಳಿಯಾಳ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ದೇಶದಲ್ಲಿ ವಿನೂತನವಾಗಿ ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ರತಿ ತಿಂಗಳ 20ನೇ ತಾರೀಖಿನಂದು ಬಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರು ಹೆಚ್ಚಾಗಿ ಸರ್ಕಾರಿ ಸಾರಿಗೆಗಳಲ್ಲಿ ಪ್ರಯಾಣಿಸುವುದರಿಂದ ವಾಯು ಮಾಲಿನ್ಯವನ್ನು ತಗ್ಗಿಸುವಲ್ಲಿ ನೇರವಾಗುತ್ತದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ಕಾರ್ಯದಕ್ಷತೆಯಿಂದ ದೇಶಕ್ಕೆ ಮಾದರಿಯಾಗಿದೆ. ನೂತನ ಘಟಕವು ಆಧುನಿಕ ಉಪಕರಣಗಳಿಂದ ಕೂಡಿದ್ದು, ಬಸ್‍ಗಳ ದುರಸ್ಥಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರಯಾಣಿಕರಿಗೆ ಸಹಾಯವಾಗಲಿವೆ ಎಂದರು.
ಹಳಿಯಾಳ ನಗರದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸ್ ನಿಲ್ದಾಣವು ರಾಜ್ಯದಲ್ಲಿಯೇ ಅತ್ಯಂತ ಆಧುನಿಕತೆಯಿಂದ ಕೂಡಿರಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ದೂರದ ಪ್ರಯಾಣ ಮಾಡುತ್ತಾರೆ. ಪ್ರಸಕ್ತ ವರ್ಷದಿಂದ ವಿಧ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ರಾಜ್ಯದ ಪ್ರತಿ ವಿದ್ಯಾರ್ಥಿಗೆ ಸರ್ಕಾರಿ ಬಸ್ ಪಾಸಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ವಿದ್ಯಾರ್ಥಿಗಳ, ಮಹಿಳಾ ಪ್ರಯಾಣಿಕರ ಹಾಗೂ ಹಿರಿಯ ನಾಗರೀಕರ ಅನುಕೂಲಕ್ಕಾಗಿ ಗ್ರಾಮೀಣ ಭಾಗದಲ್ಲಿ ಮಿನಿಬಸ್ ಸಂಚಾರಕ್ಕೆ ಉತ್ತೇಜನ ನೀಡಲಾಗುತ್ತಿದೆ ಜೊತೆಗೆ ಪ್ರತಿ ತಿಂಗಳ 2 ನೇ ತಾರೀಖಿನಂದು ನಮ್ಮ ಬಸ್ ನಮ್ಮ ನಿಲ್ದಾಣ ಎಂಬ ಸ್ವಚತಾ ಅಭಿಯಾನ ನೆಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪ್ರತಿ, ಆಶ್ರಯ ಯೋಜನೆಯ ನಿವಾಸಿಗಳಿಗೆ ಹಕ್ಕು ಪತ್ರ, ಹಾಗೂ ಕ್ರೀಡಾ ಇಲಾಖೆಯ ಯುವ ಸಬಲೀಕರಣ ಯೋಜನೆಯಡಿ ಯುವಕ ಮಂಡಳಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ಧಾರವಾಡ ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗಬಾನ್ ಪ್ರಾಸ್ತಾವಿಕವಾಗಿ ನೂತನ ಬಸ್ ಘಟಕದ ಕೀರುಚಿತ್ರಣ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ ಎಲ್ ಘೋಟ್ನೆಕರ, ವಾಕರಸಾಸಂಸ್ಥೆ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಬಿ ನಾಯಕ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ಎಸ್ ರೇಣಕೆ, ಹಳಿಯಾಳ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ತಾಲೂಕ ಪಂಚಾಯತ ಅಧ್ಯಕ್ಷೆ ರೀಟಾ ಸಿದ್ಧಿ ಸೇರಿದಂತೆ ಇನ್ನಿತರರು ಇದ್ದರು.