ಮೈಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್ (45) ಶನಿವಾರ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಅರಣ್ಯ ವಲಯದ ಕುತ್ತುನಾಳಕೊಲ್ಲಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ನಂದಿಸಲು ಸಿಬ್ಬಂದಿ ‘ಫೈರ್‌ಲೈನ್’ ಕೆಲಸ ಮಾಡುತ್ತಿದ್ದರು. ಇದನ್ನು ಪರಿಶೀಲಿಸಲು ತೆರಳಿದ್ದ ವೇಳೆ ಆನೆ ದಾಳಿ ನಡೆಸಿದೆ.
ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣಿ ಹಾಗೂ ಇತರ 15 ಮಂದಿ ಸಿಬ್ಬಂದಿ ಜತೆ ಮಣಿಕಂಠನ್ ಅವರು ಜೀಪಿನಿಂದ ಇಳಿದು ಕಾಲುದಾರಿಯಲ್ಲಿ ನಡೆಯುತ್ತಿದ್ದಾಗ ಹಿಂದಿನಿಂದ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಸ್ವಲ್ಪ ದೂರದಲ್ಲಿದ್ದ ಸಿಬ್ಬಂದಿ ಕೂಗಿ ಎಚ್ಚರಿಸಿದ್ದಾರೆ. ಆನೆ ಬರುತ್ತಿದ್ದಂತೆ ಸಿಬ್ಬಂದಿ ಚದುರಿದ್ದಾರೆ. ಆದರೆ, ತಪ್ಪಿಸಿಕೊಳ್ಳುವ ವೇಳೆ ಮಣಿಕಂಠನ್ ಹಾಗೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸುಬ್ರಹ್ಮಣಿ ಎಡವಿ ಬಿದ್ದಿದ್ದಾರೆ. ಈ ವೇಳೆ ಮಣಿಕಂಠನ್ ಅವರನ್ನು ಆನೆ ತುಳಿದಿದೆ. ಚದುರಿದ ಸಿಬ್ಬಂದಿ ಕೂಗಾಟ ನಡೆಸುತ್ತಿದ್ದಂತೆ ಇತರೆ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಹೋಗಿದೆ. ನಂತರ, ಕಾಡಿನಲ್ಲಿ ಮರೆಯಾಗಿದೆ.
ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಬಿದ್ದ ತೀವ್ರ ಪೆಟ್ಟಿನಿಂದ ಸ್ಥಳದಲ್ಲೇ ಮಣಿಕಂಠನ್ ಮೃತಪಟ್ಟಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಸುಬ್ರಹ್ಮಣಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಸಿಎಫ್ ಪೂವಯ್ಯ ತಿಳಿಸಿದರು.
ಬಂದೂಕು ಇರಲಿಲ್ಲ: ಬೆಳಿಗ್ಗೆಯಿಂದಲೂ ಇದೇ ಪ್ರದೇಶದಲ್ಲಿ 40ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದುದ್ದರಿಂದ ಮಣಿಕಂಠನ್ ಬಂದೂಕು ಇಲ್ಲದೇ ಕಾಡಿನೊಳಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲದೇ, ಅದು ತೀರಾ ಚಿಕ್ಕದಾದ ಕಾಲುದಾರಿಯಾಗಿದ್ದರಿಂದ ರಕ್ಷಿಸಿಕೊಳ್ಳುವುದು ಕಷ್ಟಕರವಾಗಿತ್ತು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.
2017ರಲ್ಲಿ ರಾಜ್ಯ ಅರಣ್ಯ ಇಲಾಖೆ ನೀಡುವ ಉತ್ತಮ ಹುಲಿ ಸಂರಕ್ಷಣಾಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದರು. ಜಿಲ್ಲಾಡಳಿತದ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ಹಿನ್ನೆಲೆ: ತಮಿಳುನಾಡಿನ ಮದುರೈ ಸಮೀಪದ ಕಂಬಂ ಗ್ರಾಮದವರಾದ ಮಣಿಕಂಠನ್, 2001ರ ಬ್ಯಾಚಿನ ಐಎಫ್‌ಎಸ್ ಅಧಿಕಾರಿ. ಇವರು ಈ ಹಿಂದೆ ಬಳ್ಳಾರಿ, ಬೀದರ್, ಬಿಳಿಗಿರಿ ರಂಗನಬೆಟ್ಟ, ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ, ಕಳೆದ ಎರಡು ವರ್ಷಗಳಿಂದ ನಾಗರಹೊಳೆಯ ಹುಲಿ ಯೋಜನೆ ನಿರ್ದೇಶಕರಾಗಿದ್ದರು. ಇವರಿಗೆ ಪತ್ನಿ ಸಂಗೀತಾ, ಪುತ್ರಿ ಮಿಥಿಲಾ ಹಾಗೂ ಪುತ್ರ ಕವಿಲೇಶ್ ಇದ್ದಾರೆ.
ಕಚೇರಿಯಲ್ಲಿ ಕುಳಿತುಕೊಳ್ಳದ ಅಧಿಕಾರಿ
ಮಣಿಕಂಠನ್ ಕಚೇರಿಯಲ್ಲಿ ಕುಳಿತು ಸೂಚನೆ ನೀಡುವ ಅಧಿಕಾರಿಯಾಗಿರಲಿಲ್ಲ. ಎಂತಹುದೇ ಪರಿಸ್ಥಿತಿ ಇದ್ದರೂ ಸ್ಥಳಕ್ಕೆ ತೆರಳಿ ಕಾರ್ಯಾಚರಣೆಯ ಮುಂದಾಳತ್ವ ವಹಿಸುತ್ತಿದ್ದರು ಎಂದು ಸಿಸಿಎಫ್ ಮನೋಜ್‌ಕುಮಾರ್ ತಿಳಿಸಿದರು.
ಬಳ್ಳಾರಿಯಲ್ಲಿ ಇವರು ಅತ್ಯಂತ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು. ನಾಗರಹೊಳೆಯಲ್ಲಿ ಎಲ್ಲೇ ಬೆಂಕಿ ಬಿದ್ದರೂ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಸಿಬ್ಬಂದಿಗೆ ಕಾರ್ಯಾಚರಣೆಯ ಸ್ವರೂಪ ಕುರಿತು ಮನವರಿಕೆ ಮಾಡಿಕೊಡುತ್ತಿದ್ದರು ಎಂದು ಅವರು ಹೇಳಿದರು.