ಸಾಗರ: ಶಂಕರಾಚಾರ್ಯರ ನಂತರ ಕಂಡೂ ಕೇಳರಿಯದಂತಹ ಸಾಧನೆಗಳ ಮೂಲಕ ಕ್ರಾಂತಿಯನ್ನೇ ನಡೆಸಿದ ಶ್ರೀಚಂದ್ರಶೇಖರಾನಂದ ಸರಸ್ವತಿ ಶ್ರೀಗಳ ಮುಂದಿನ ಹೆಜ್ಜೆಯೇ ಆಗಿ, ವಿದ್ಯಾಸಂಸ್ಥೆಗಳು-ಆರೋಗ್ಯಸಂಸ್ಥೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಮಾಜಕ್ಕೆ ನೀಡಿದವರು ಶ್ರೀ ಜಯೆಂದ್ರ ಸರಸ್ವತಿ ಶ್ರೀಗಳ ಬಂಧನವಾಗಿ ಅನ್ಯಾಯವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಸಾಗರದಲ್ಲಿ ನಡೆದ ವಿಪ್ರಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಅಯೋಧ್ಯೆಯ ಶ್ರೀರಾಮಮಂದಿರ ವಿಚಾರದಲ್ಲಿಯೂ ಯೋಚನೆ-ಯೋಜನೆಗಳ ಮೂಲಕ ತಮ್ಮ ಹೆಜ್ಜೆಗಳನ್ನಿಟ್ಟಿದ್ದರು. ಆದರೆ ಅಂತಹ ಸಮಾಜಕ್ಕೆ ಎಲ್ಲವನ್ನು ಕೊಟ್ಟು ತಮ್ಮನ್ನೇ ಸಮಾಜಕ್ಕೆ ಸಮರ್ಪಿಸಿದ ಶ್ರೇಷ್ಠ ಸಂತರಿಗೆ ಸಮಾಜದ ಕೊಡುಗೆ ಏನು ಎಂದು ಶ್ರೀಗಳು ಪ್ರಶ್ನಿಸಿದರು.

ಇತ್ತೀಚೆಗೆ ಬ್ರಹೈಕ್ಯರಾದ ಕಂಚಿಯ ಶ್ರೀಶ್ರೀಜಯೇಂದ್ರ ಸರಸ್ವತಿ ಸ್ವಾಮಿಗಳಿಗೆ ಕೆಲವು ವರ್ಷಗಳ ಅನ್ಯಾಯದಿಂದ, ಕೊಲೆ ಪ್ರಕರಣದಲ್ಲಿ ಯಾವುದೇ ಸಾಕ್ಷಿಪುರಾವೆಗಳಿಲ್ಲದೇ ಬಂಧಿಸಿ ಜೈಲಲ್ಲಿಡಲಾಗಿತ್ತು. ಅವರ ಪೂಜೆ, ನಿತ್ಯ ಆಚರಣೆಗಳಿಗೇ ಇನ್ನಿಲ್ಲದ ತೊಂದರೆಯನ್ನು ಕೊಡಲಾಗಿತ್ತು. ಆ ಸಮಯದಲ್ಲಿ ಇಡೀ ಸಮಾಜ ಒಂದಾಗಬೇಕಿತ್ತು. ಆಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ಎಂದು ಪ್ರಶ್ನಿಸುವ ಮೂಲಕ ವಿಷಾದ ವ್ಯಕ್ತಪಡಿಸಿದರು.

RELATED ARTICLES  ಅಂಕೋಲಾದಲ್ಲಿ ಅಪಘಾತ ಓರ್ವ ಮೃತ

ಶಂಕರಾಚಾರ್ಯ ಪೀಠಾಧೀಶರ ಸಮಾಗಮವಾದ ದಿನದಂದೇ ಅವರ ಬಂಧನವಾಗಿತ್ತು. ಯಾವ ಸಂತರೂ ಅವರ ಪರವಾಗಿ ಮಾತನಾಡಬಾರದು ಎಂಬ ಸೂಚನೆಯಿತ್ತು. ಪರಿಣಾಮವಾಗಿ ಯಾವ ಶಂಕರಾಚಾರ್ಯ ಶ್ರೀಗಳೂ ಅವರ ಪರವಾಗಿ ಧ್ವನಿ ಎತ್ತಲಿಲ್ಲ. ನಮಗೆ ಧ್ವನಿ ಎತ್ತದೇ ಇರಲು ಆಗಲಿಲ್ಲ. ’ರಾಜಕಾರಣಿಗಳೇ, ಕಾವಿ ಮುಟ್ಟಿದರೇ ಬೆಂಕಿ ಮುಟ್ಟಿದಂತೆ’ ಎಂದು ಅವರ ಬಂಧನದ ವಿರುದ್ಧ ತಾವು ಮಾತನಾಡಿದ್ದೆವು. ಬಂಧನ ಎನ್ನುವುದು ರಾಜಕೀಯ ದಾಳವಾಗಿಬಿಟ್ಟಿದೆ ಎಂದು ಶ್ರೀಗಳು ವಿಷಾದಿಸಿದರು.

ಸಮಾಜದ ಮಧ್ಯದಲ್ಲಿ ಸಂತರೂ ಅಥವಾ ವ್ಯಕ್ತಿಗಳು ಮಹಾಶಕ್ತಿಯಂತೆ ಎದ್ದುಬಂದಾಗ ಅವರಿಗೆ ತೊಂದರೆ ಕೊಡುವವರೇ ಹೆಚ್ಚು. ಹೀಗೆ ಸಮಾಜಕ್ಕೇ ತೊಂದರೆ ಬಂದಾಗ ಹೆಚ್ಚಿನವರು ಮೌನಕ್ಕೆ ಶರಣಾದರೇ, ಇನ್ನೂ ಕೆಲವರು ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ ಎಂದು ಪ್ರಸ್ತುತ ನಡೆಯುತ್ತಿರುವ ತಪ್ಪುಗಳ ಬಗ್ಗೆ ಹೇಳಿ ಶ್ರೀಗಳು ಎಚ್ಚರಿಕೆಯ ಘಂಟೆಯಂತೆ ನುಡಿದರು.

RELATED ARTICLES  ನಂಬಿಕೆಯ ವಿಜ್ಞಾನವನ್ನು ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳಲಿ: ರಾಘವೇಶ್ವರ ಶ್ರೀ

ಬ್ರಾಹ್ಮಣರ ಸಂಖ್ಯೆ ಕಡಿಮೆಯಾದರೂ ಸಮಾಜಕ್ಕೆ-ದೇಶಕ್ಕೆ ಬ್ರಾಹ್ಮಣರ ಕೊಡುಗೆ ಅಪಾರವಾದದ್ದು. ರಾಷ್ಟ್ರಭಕ್ತ ಸಮುದಾಯವಾಗಿ ದೇಶಕ್ಕಾಗಲೀ, ಸಂಸ್ಕೃತಿಗಾಗಲೀ ಬ್ರಾಹ್ಮಣ ಸಮುದಾಯ ಎಂದೂ ದ್ರೋಹ ಮಾಡಿಲ್ಲ. ಸಂಸ್ಕೃತಿ ಕಟ್ಟಿ ಸ್ವರೂಪ ಕೊಟ್ಟು, ಧರ್ಮಪ್ರಜ್ಞೆ ಹೊಂದಿದ ಸಮಾಜ ಬ್ರಾಹ್ಮಣ ಸಮಾಜ. ಕಷ್ಟಗಳು ಬಂದಾಗ, ಸತ್ಯ-ನ್ಯಾಯ ಇದ್ದಲ್ಲಿ ಅನ್ಯಾಯವಾದಾಗ ಸಂಘಟಿತರಾಗಿ ಸಮಾಜ ಒಂದಾಗಿ ಅನ್ಯಾಯದ ವಿರುದ್ಧ ಮೆಟ್ಟಿ ನಿಲ್ಲಬೇಕಿದೆ. ಆ ಹಿನ್ನೆಲೆಯಲ್ಲಿ ಸಮಾಜದ ಒಳಿತಿಗಾಗಿ ಇಂತಹ ಸಮ್ಮೇಳನಗಳು ಅತ್ಯಗತ್ಯವಾಗಿದೆ ಎಂದು ಶ್ರೀಗಳು ಹೇಳಿದರು.

ವಿಪ್ರ ಸಮ್ಮೇಳನದ ಅಧ್ಯಕ್ಷರಾದ ಯು.ಎಚ್. ರಾಮಪ್ಪ, ಸಿಗಂಧೂರು ಶ್ರೀಕ್ಷೇತ್ರದ ಶೇಷಗಿರಿ ಭಟ್ಟರು, ಹೊರನಾಡು ಶ್ರೀಕ್ಷೇತ್ರದ ಭೀಮೇಶ್ವರ ಜೋಶಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ರವೀಶ, ಹವ್ಯಕಸಮಾಜದ ಪ್ರಮುಖರಾದ ಹರನಾಥ್ ರಾವ್ ಮತ್ತಿಕೊಪ್ಪ ಮತ್ತಿತರ ಗಣ್ಯರು ಹಾಗೂ ತ್ರಿಮತಸ್ಥ ಬ್ರಾಹ್ಮಣ ಸಮಾಜದ ಸಾವಿರಾರು ಜನರು ಭಾಗವಹಿಸಿದ್ದರು.