ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) ತ್ರಿಪುರಾದಲ್ಲಿ ಐತಿಹಾಸಿಕ ಗೆಲುವು ಮತ್ತು ನಾಗಾಲ್ಯಾಂಡ್‌, ಮೇಘಾಲಯಗಳಲ್ಲಿ ಮಹತ್ವದ ಪ್ರಗತಿ ಸಾಧಿಸುವ ಮೂಲಕ ದೇಶಾದ್ಯಂತ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ಈ ಮೂರು ಈಶಾನ್ಯ ರಾಜ್ಯಗಳ ಫಲಿತಾಂಶ ಎರಡೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ತ್ರಿಪುರಾದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿರುವ ಎಡಪಕ್ಷ ಸರ್ಕಾರವನ್ನು ಕಿತ್ತೊಗೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಈಶಾನ್ಯ ಭಾರತದಲ್ಲಿ ಹೊಸ ಕೇಸರಿ ಯುಗ ಪ್ರಾರಂಭವಾಗಿದೆ.
60 ಕ್ಷೇತ್ರಗಳಿರುವ ತ್ರಿಪುರಾ ವಿಧಾನಸಭೆಯಲ್ಲಿ ಬಿಜೆಪಿ 44 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದೆ. ಮಾಣಿಕ್ ಸರ್ಕಾರ್ ನೇತೃತ್ವದ ಸಿಪಿಐಎಂ ಪಕ್ಷ ಕೇವಲ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಇಲ್ಲಿ ಧೂಳೀಪಟವಾಗಿದೆ. ಬಿಜೆಪಿ ಕಳೆದ ಬಾರಿ ಇಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಕಳೆದ ಬಾರಿ 10 ಕ್ಷೇತ್ರಗಳಲ್ಲಿ ಜಯಿಸಿದ್ದ ಕಾಂಗ್ರೆಸ್ ಈ ಬಾರಿ ಶೂನ್ಯ ಸಂಪಾದನೆ ಮಾಡಿದೆ.
ಬಿಜೆಪಿ ಚುನಾವಣೆಯಿಂದ ಚುನಾವಣೆಗೆ ತನ್ನ ಆಡಳಿತದ ರಾಜ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಕಾಂಗ್ರೆಸ್ ತನ್ನ ಹಿಡಿತದಲ್ಲಿರುವ ರಾಜ್ಯಗಳನ್ನು ಕಳೆದುಕೊಳ್ಳುತ್ತಲೇ ಸಾಗಿದೆ. ಇದೀಗ ಮೇಘಾಲಯದಲ್ಲೂ ಅಧಿಕಾರ ಕಳೆದುಕೊಂಡು ಅತಂತ್ರ ಸ್ಥಿತಿ ಎದುರಿಸುತ್ತಿದೆ.
ಮೇಘಾಲಯದಲ್ಲಿ ಏಕೈಕ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರ್ಕಾರ ರಚಿಸುವ ಹಕ್ಕನ್ನು ಮಂಡಿಸುವ ಸಾಧ್ಯತೆ ಇದೆ. ಆದರೆ ಇದೇ ವೇಳೆ ಬಿಜೆಪಿ ಕೂಡ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿಕೊಂಡು ಸರ್ಕಾರ ರಚಿಸುವ ಯತ್ನದಲ್ಲಿ ತೊಡಗಿಕೊಂಡಿದೆ.
ತ್ರಿಪುರಾ ಹಾಗೂ ನಾಗಾಲ್ಯಾಂಡ್‌ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಗೆಲುವು ಸಾಧಿಸಿದ್ದು, ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಏರ್ಪಟ್ಟಿದೆ. ಈಶಾನ್ಯ ಭಾರತದಲ್ಲಿ ಎನ್‌ಡಿಎ ಹಿಡಿತದಿಂದ ಹೊರಗುಳಿದ ರಾಜ್ಯವೆಂದರೆ ಮಿಜೋರಾಂ ಮಾತ್ರ.

RELATED ARTICLES  ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೋ ಕಳ್ಳತನ ಕೇಸ್ : ಆರೋಪಿಗಳು ಪೊಲೀಸ್ ಕಸ್ಟಡಿಗೆ.