ಬೆಂಗಳೂರು: ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಇನ್ನು ಮುಂದೆ ಮುಜರಾಯಿ ಇಲಾಖೆಯಡಿ ಬರುತ್ತದೆ, ವಕ್ಫ್ ಮಂಡಳಿಯಡಿ ಅಲ್ಲ ಎಂದು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. 1947ಕ್ಕೆ ಮುನ್ನ ದತ್ತ ಪೀಠದಲ್ಲಿ ನಡೆಯುತ್ತಿದ್ದ ಸಂಪ್ರದಾಯಗಳು ಇನ್ನು ಮುಂದುವರಿಯಲಿದೆ.
ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್ ದಾಸ್ ಅವರ ನೇತೃತ್ವದ ತಜ್ಞರ ಸಮಿತಿ ಮಾಡಿರುವ ಶಿಫಾರಸುಗಳನ್ನು ಸ್ವೀಕರಿಸಲಾಗಿದೆ. ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಿಂದನಾ ಅರ್ಜಿ ಸಲ್ಲಿಸಿದ ನಂತರ ಸಮಿತಿಯನ್ನು ರಚಿಸಲಾಗಿತ್ತು. ವರದಿ ಸಲ್ಲಿಸಲು ಇದ್ದ ಕಾಲಾವಕಾಶವನ್ನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೆವು. 1947ಕ್ಕಿಂತ ಮುಂಚೆ ದತ್ತಪೀಠದಲ್ಲಿ ನಡೆಯುತ್ತಿದ್ದ ಸಂಪ್ರದಾಯಗಳು ಇನ್ನು ಕೂಡ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
2015ರಲ್ಲಿ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಹೇಳಿತ್ತು. ಸುಪ್ರೀಂಕೋರ್ಟ್ ಆದೇಶ ಪ್ರಕಾರ, ಜಯಚಂದ್ರ ನೇತೃತ್ವದ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು. ಈ ಸಂದರ್ಭದಲ್ಲಿ ತಜ್ಞರ ಸಮಿತಿಯ ಅವಶ್ಯಕತೆಯಿದೆಯೆಂದು ಉಪ ಸಮಿತಿ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಖ್ಯಾತ ಇತಿಹಾಸತಜ್ಞ ಎಸ್.ಶೆಟ್ಟರ್ ಮತ್ತು ಬರಹಗಾರ ಹಂಪಿ ವಿಶ್ವವಿದ್ಯಾಲಯದ ರೆಹ್ಮತ್ ತರೀಕೆರೆ ಸಮಿತಿಯಲ್ಲಿದ್ದರು. ಸಮಿತಿಯ ಸದಸ್ಯರು ನಾಸ್ತಿಕರು ಎಂಬ ಕಾರಣಕ್ಕೆ ಬಿಜೆಪಿ ಅಂದು ಈ ಸಮಿತಿಯನ್ನು ವಿರೋಧಿಸಿತ್ತು.