ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್ ತಟ್ಟಿದೆ! ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಮಾರ್ಚ್ ಮೊದಲ ವಾರದಲ್ಲೇ ತಾಂತ್ರಿಕ ಕಾರಣಗಳ ನೆಪವೊಡ್ಡಿ ಅನಧಿಕೃತ ಲೋಡ್​ಶೆಡ್ಡಿಂಗ್ ಜಾರಿಗೊಳಿಸಲಾಗಿದೆ. ಜಲಾಶಯಗಳಲ್ಲಿ ನೀರಿನ ಕೊರತೆ, ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯ ಇತ್ಯಾದಿ ಕಾರಣಗಳಿಂದಾಗಿ ಏಪ್ರಿಲ್, ಮೇನಲ್ಲೇ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುವ ಲಕ್ಷಣ ಗೋಚರಿಸಿವೆ. ಚಳಿಗಾಲದಲ್ಲಿ ಇದ್ದ 7500-8500 ಮೆಗಾವಾಟ್ ವಿದ್ಯುತ್ ಬೇಡಿಕೆ ಫೆಬ್ರವರಿ ಕೊನೆ ವಾರದಲ್ಲಿ 9 ಸಾವಿರ ಮೆವಾ ದಾಟಿತ್ತು. ಮಾರ್ಚ್ ಮೊದಲ ದಿನವೇ ವಿದ್ಯುತ್ ಬೇಡಿಕೆ 9800 ಮೆಗಾವಾಟ್​ಗೆ ಜಿಗಿದಿರುವುದರಿಂದ ಒಟ್ಟಾರೆ ಬೇಡಿಕೆ ಪರಿಣಾಮ ಮಾಸಾಂತ್ಯಕ್ಕೆ 10,500 ಮೆವಾ ದಾಟಬಹುದೆಂದು ಅಂದಾಜಿಸಲಾಗಿದೆ.

ಸರಣಿ ಸವಾಲು

ಸದ್ಯದ ಬೇಡಿಕೆ ಅನ್ವಯ ರಾಜ್ಯಕ್ಕೆ 2 ಸಾವಿರ ಮೆವಾ ವಿದ್ಯುತ್ ಕೊರತೆಯಾಗುತ್ತಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಮಸ್ಯೆ ಬಾಧಿಸುತ್ತಿದೆ. ಈ ಮೊದಲು 15 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರುತ್ತಿತ್ತು. ಆದರೆ ಈಗ ಸರಬರಾಜು ಸಮಸ್ಯೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಮೂರ್ನಾಲ್ಕು ದಿನಗಳಿಗೂ ಸಾಕಾಗುವುದಿಲ್ಲ. ಬಳ್ಳಾರಿ, ರಾಯಚೂರು, ಯರಮರಸ್ ಸೇರಿ ನಾಡಿನ ಎಲ್ಲ್ಲ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪ್ರತಿ ವರ್ಷ ಅಂದಾಜು 172 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲಿನ ಅಗತ್ಯವಿದೆ. ಆದರೆ ಕೇಂದ್ರದಿಂದ ಬರುವ ಕಲ್ಲಿದ್ದಲು ಪ್ರಮಾಣ ಕಡಿಮೆಯಾಗಿದೆ. ಅದ್ದರಿಂದ ರಾಜ್ಯ ಸರ್ಕಾರ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ. ಕೇಂದ್ರ ಇಂಡಿಯನ್ ಎಕ್ಸ್​ಚೇಂಜ್ ಮೂಲಕ 300 ಮೆವಾ, ಅಲ್ಪಕಾಲಿಕ ಟೆಂಡರ್ ಮೂಲಕ 500 ಮೆವಾ ವಿದ್ಯುತ್ ಪಡೆದಿದ್ದರೂ ಸಮಸ್ಯೆ ನೀಗಿಲ್ಲ. ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳೂ ಕಾಣುತ್ತಿಲ್ಲ.

RELATED ARTICLES  ಕೆನರಾ ಸಂಸದ ಅನಂತ ಕುಮಾರ್ ಹೆಗಡೆ ಮೋದಿ ಸಂಪುಟ ಸೇರಿದ ಕ್ಷಣಗಳು.

3553 ದಶಲಕ್ಷ ಯುನಿಟ್

ಬೇಸಿಗೆ ನಿಭಾಯಿಸಲು ಲಿಂಗನಮಕ್ಕಿ, ಸೂಪಾ ಮತ್ತು ಮಾಣಿ ಜಲಾಶಯಗಳಲ್ಲಿ ಕನಿಷ್ಠ 4500 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಬಹುದಾದಷ್ಟು ನೀರು ಬೇಕಾಗುತ್ತದೆ. ಆದರೆ ಈಗ ಅಲ್ಲಿರುವ ನೀರಿನ ಸಂಗ್ರಹದಿಂದ 3553 ದಶಲಕ್ಷ ಯುನಿಟ್ ವಿದ್ಯುತ್ ಅಷ್ಟೇ ಉತ್ಪಾದಿಸಬಹುದು.

RELATED ARTICLES  ಕರುಣಾಕರನ ಪಾದ ಸೇರಿದ ಕರುಣಾನಿಧಿ! ಕಳಚಿದೆ ದ್ರಾವಿಡ ಚಳವಳಿಯ ಕಡೆಯ ಕೊಂಡಿ.

ಉತ್ಪಾದನೆ ಎಷ್ಟಿದೆ?

ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮದ ಆರ್​ಟಿಪಿಎಸ್, ಬಿಟಿಪಿಎಸ್, ವೈಟಿಪಿಎಸ್, ಲಿಂಗನಮಕ್ಕಿ, ವಾರಾಹಿ, ಗೇರುಸೊಪ್ಪ ಸೇರಿದಂತೆ ಎಲ್ಲ ಯೋಜನೆಗಳಿಂದ ಸದ್ಯ ವಿದ್ಯುತ್ ಗ್ರಿಡ್​ಗೆ 5366 ಮೆವಾ ವಿದ್ಯುತ್ ಲಭ್ಯವಾಗುತ್ತಿದೆ. ಹೆಚ್ಚೆಂದರೆ ಈ ಪ್ರಮಾಣ 5600 ಮೆವಾಗೆ ಹೋಗಬಹುದು. ಕೇಂದ್ರ ಸರ್ಕಾರದ ಪಾಲು 3 ಸಾವಿರ ಮೆವಾ ಲಭ್ಯವಾಗುತ್ತಿದೆ. ಹೀಗಾಗಿ ಹೆಚ್ಚಿನ ವಿದ್ಯುತ್​ಗಾಗಿ ಖರೀದಿ ಅನಿವಾರ್ಯ ಆಗಿದೆ.