ನವದೆಹಲಿ: ಭಾರತವು ಸೇನಾ ಶಕ್ತಿಯಲ್ಲಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.
ಇನ್ನು ಅಮೆರಿಕ ಸೇನೆ ಶಕ್ತಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ರಷ್ಯಾ ಮತ್ತು ಚೀನಾ ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಗ್ಲೋಬಲ್ ಫೈರ್ ಪವರ್ ಎಂಬ ಸಂಸ್ಥೆ 133 ದೇಶಗಳ ಮಿಲಿಟರಿ ಶಕ್ತಿಯನ್ನು ತುಲನೆ ಮಾಡಿ 2017ನೇ ಸಾಲಿಗೆ ಈ ಪಟ್ಟಿಯನ್ನು ಪ್ರಕಟಿಸಿದೆ.
2016ರ ಈ ಸಮೀಕ್ಷೆಯಲ್ಲೂ ಭಾರತ ಮಿಲಿಟರಿ ಶಕ್ತಿ ನಾಲ್ಕನೇ ಸ್ಥಾನದಲ್ಲಿತ್ತು. ಇನ್ನು ಕುತೂಹಲದ ಸಂಗತಿಯೆಂದರೆ ಪಾಕಿಸ್ತಾನದ ಸೇನಾಪಡೆ ಕೂಡ ಟಾಪ್ 15 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಜಗತ್ತಿನಲ್ಲೇ 13ನೇ ಬಲಶಾಲಿ ಸೇನಾಪಡೆ ಎನಿಸಿಕೊಂಡಿದೆ.
ಟಾಪ್ 10 ದೇಶಗಳ ಪಟ್ಟಿಯಲ್ಲಿ ಫ್ರಾನ್ಸ್, ಬ್ರಿಟನ್, ಜಪಾನ್, ಟರ್ಕಿ ಮತ್ತು ಜರ್ಮನಿ ಸ್ಥಾನ ಪಡೆದಿದೆ. ಗ್ಲೋಬಲ್ ಫೈರ್ ಪವರ್ ಸಂಸ್ಥೆ ಸೇನಾ ಪಡೆಗಳಲ್ಲಿ ಲಭ್ಯವಿರುವ ಸಂಪನ್ಮೂಲ(ಯುದ್ಧ ಸಾಮಗ್ರಿಗಳು), ಔದ್ಯೋಗಿಕ ಹಾಗೂ ಭೌಗೋಳಿಕ ಲಕ್ಷಣಗಳು ಮತ್ತು ಯೋಧರ ಸಂಖ್ಯೆಯಲ್ಲಿ ಆಧರಿಸಿ ರ್ಯಾಂಕಿಂಗ್ ನೀಡುತ್ತದೆ.
ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ಭಾರತವೇ ಮುಂದು. ಸಮೀಕ್ಷೆಯ ಪ್ರಕಾರ ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ಭಾರತದ ಸೇನೆ ಚೀನಾಕ್ಕಿಂತ ಮುಂದಿದೆ. ಭಾರತದಲ್ಲಿ 42,07,250 ಸಶಸ್ತ್ರ ಯೋಧರಿದ್ದರೆ ಚೀನಾದಲ್ಲಿ 37,12,500 ಸಶಸ್ತ್ರ ಯೋಧರಿದ್ದಾರೆ. ಆದರೆ, ಪೂರ್ಣಾವಧಿ ಸಶಸ್ತ್ರ ಯೋಧರ ಸಂಖ್ಯೆಯಲ್ಲಿ ಚೀನಾ ಸೇನಾಪಡೆಯೇ ಮುಂದಿದೆ. ಅಲ್ಲಿ 22,60,000 ಯೋಧರಿದ್ದರೆ ಭಾರತದಲ್ಲಿ 14,52,500 ಯೋಧರಿದ್ದಾರೆ.
ಸಮೀಕ್ಷೆಯ ಪ್ರಕಾರ ಭಾರತದ ಸೇನಾಪಡೆಗಳು ಎಲ್ಲಾ ವಿಷಯದಲ್ಲೂ ಪಾಕಿಸ್ತಾನದ ಸೇನಾ ಪಡೆಗಳಿಗಿಂತ ಸಾಮರ್ಥ್ಯದಲ್ಲಿ ಮುಂದಿವೆ. ಆದರೆ, ದಾಳಿ ನಡೆಸುವ ಹೆಲಿಕಾಪ್ಟರ್ ಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಹಾಗೂ ಜಲಸಾರಿಗೆ ವಿಷಯದಲ್ಲಿ ಪಾಕಿಸ್ತಾನವೇ ಭಾರತಕ್ಕಿಂತ ಮುಂದಿದೆ.

RELATED ARTICLES  ಮಾರ್ಚ 31 ರ ವರೆಗೂ ಕರ್ನಾಟಕದಲ್ಲಿ ನಿರ್ಬಂಧ ಮುಂದುವರಿಕೆ.