ಯಲ್ಲಾಪುರ: ನೀರು ವಿದ್ಯುತ್ ಸೌಲಭ್ಯದಿಂದ ವಂಚಿತರಾದ ಗ್ರಾಮಸ್ಥರು ಬರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿರುವ ಘಟನೆ ಯಲ್ಲಾಪುರ ತಾಲೂಕಿನ ಗಡಿ ಗ್ರಾಮವಾದ ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದ ಹೆಬ್ಬಾರಗುಡ್ಡ ದಲ್ಲಿ ಕೇಳಿ ಬಂದಿದೆ.
ಹೆಬ್ಬಾರಗುಡ್ಡ ಅಂಕೋಲಾ ತಾಲೂಕಿನ ಅತ್ಯಂತ ಕುಗ್ರಾಮವಾಗಿದ್ದು, ಮೂಲಬೂತ ಸೌಕರ್ಯಗಳಾದ ಕುಡಿಯುವ ನೀರು ಹಾಗೂ ವಿದ್ಯುತ್ ಮತ್ತು ಸರ್ವ ಋತು ಸಂಪರ್ಕ ಸೇತುವೆ ಈ ಗ್ರಾಮಕ್ಕೆ ಒಡಗಿಸಬೇಕೆಂದು ಅನೇಕ ವರ್ಷದಿಂದ ಬೇಡಿಕೆಯಿಡಲಾಗಿದೆ. ಚುನಾವನೇ ಸಂದರ್ಭದಲ್ಲಿ ಮತ ಯಾಚಿಸಲು ಬರುವ ಅಬ್ಯರ್ಥಿಗಳು, ಆಯ್ಕೆಯಾದ ನಂತರ ಮತ್ತು ಚುನಾವಣೆಯ ಸೋಲಿನ ನಂತರ ಮರೆತು ಬಿಡುತ್ತಾರೆ. ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.
ಈ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮೂಲಭೂತ ಸೌಕರ್ಯ ಒದಗಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಕುರಿತು ತಿಳಿಸಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಗ್ರಾಮಸ್ಥರು ಪ್ರದರ್ಶಿಸಿದರು. ಕಳೆದ ಅನೇಕ ವರ್ಷಗಳಿಂದ ಹೆಬ್ಬಾರಗುಡ್ಡದ ನಾಗರಿಕರು ಸರಕಾರಕ್ಕೆ ಮನವಿ ಸಲ್ಲಿಸಿದರೂ ಸಹಾ ಇದುವರೆಗೂ ಸರ್ವಋತು ರಸ್ತೆ ಮತ್ತು ವಿದ್ಯುತ್ ಸೌಲಭ್ಯ ಒದಗಿಸಿಲ್ಲ, ವಿದ್ಯುತ್ ಮಾರ್ಗಕ್ಕಾಗಿ ಅನೇಕ ಬಾರಿ ಪರಿಶೀಲನೆ ನಡೆಸಿದರೂ ಸಹ ವಿದ್ಯುತ್ ಸಂಪರ್ಕ ಕಲ್ಪಿಸಲಿಲ್ಲ, ಇಲ್ಲಿನ ಜನರ ಬಾಳು ಕತ್ತಲಲ್ಲಿಯೇ ಕಳೆಯ ಬೇಕಾಗಿದೆ. ಈಗಂತೂ ಸರಕಾರ ಪಡಿತರದಲ್ಲಿ ಸೀಮೆ ಎಣ್ಣೆ ನೀಡುವುದನ್ನು ನಿಲ್ಲಿಸಿದ್ದು, ದೀಪಕ್ಕೆ ಎಣ್ಣೆ ಇಲ್ಲದೆ ಇನ್ನಷ್ಟು ಬದುಕು ಕತ್ತಲಲ್ಲಿ ದೂಡವಂತಾಗಿದೆ.
ಹೆಬ್ಬಾರಗುಡ್ಡದ ದುಃಸ್ಥಿಯ ಬಗ್ಗೆ ಅನೇಕ ಬಾರಿ ಪತ್ರಿಕೆಗಳಲ್ಲಿ ವರದಿಯಾದರೂ ಸಹ ಇನ್ನೂವರೆಗೆ ಯಾವುದೇ ಕ್ರಮ ಕೈಗೊಳ್ಲದೇ ಇರುವುದರ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಲ್ಲದೇ ಇನ್ನೂ ಎಷ್ಟು ಶತಮಾನ ನಾವು ಕತ್ತಲಲ್ಲಿ ಕಳೆಯಬೇಕೆಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಗ್ರಾಮಸ್ಥರಾದ ಕೃಷ್ಣ ತಿಮ್ಮಣ್ಣ ಗಾಂವ್ಕರ, ದಿನೇಶ ಕೆ ಗಾಂವ್ಕರ, ದಯಾನಂದ ಸಿದ್ದಿ, ವಿಷ್ಣು ಸಿದ್ದಿ, ಕವಿತಾ ಸಿದ್ದಿ, ವಿನಾಯಕ ಸಿದ್ದಿ, ನಾರಾಯಣ ಸಿದ್ದಿ, ರಾಜೇಶ ಸಿದ್ದಿ, ಮುಂತಾದವರು ಮನವಿಗೆ ಸಹಿ ಮಾಡಿ ಆಗ್ರಹಿಸಿದ್ದಾರೆ.