ಶಿರಸಿ: ಮನುವಿಕಾಸ ಸಂಸ್ಥೆ ವಿವಿದ ಸಂಘ ಸಂಸ್ಥೆಗಳ ಜೊತೆಗೂಡಿ ಬನವಾಸಿ ವಲಯದಲ್ಲಿ 10 ಕೆರೆಗಳ ಪುನರುಜ್ಜೀವನ ಮಾಡುತ್ತಿದ್ದು, ಇದರ ಅಂಗವಾಗಿ ತಾಲೂಕಿನ ದೊಡ್ಡ ಕೆರೆ ಎಂದೇ ಹೆಸರಾದ ಗುಡ್ನಾಪುರದ ಬಂಗಾರೇಶ್ವರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಗುಡ್ನಾಪುರ ಬಂಗಾರೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷ ಪರಶುರಾಮಪ್ಪ ಈಡೂರ ಮಾತನಾಡಿ, ಈಗಾಗಲೇ ಮನು ವಿಕಾಸ ಸಂಸ್ಥೆ 5 ಕೆರೆಗಳ ಕಾಮಗಾರಿ ಅತೀ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದೆ. ಮನುವಿಕಾಸ ಕಳೆದ 15 ವರ್ಷಗಳಿಂದ ಸತತವಾಗಿ ಸಣ್ಣ ಕೆರೆಗಳು, ಕೃಷಿ ಹೊಂಡಗಳು ಮತ್ತು ದೊಡ್ಡ ಕೆರೆಗಳನ್ನು ಅಭಿವೃದ್ಧಿಪಡಿಸುತ್ತ ನೀರು ಸಂರಕ್ಷಣೆಯಲ್ಲಿ ತೊಡಗಿದೆ. ಈ ಸಂಸ್ಥೆ ಗುಡ್ನಾಪುರ ಗ್ರಾಮಕ್ಕೆ ಆಗಮಿಸಿ ಕೆರೆ ಅಭಿವೃದ್ಧಿ ಪಡಿಸುತ್ತಿರುವುದು ಈ ಭಾಗದ ಜನರ ಭಾಗ್ಯವಾಗಿದೆ ಎಂದು ಹೇಳಿದರು.
ಈ ಕೆರೆ ಪ್ರವಾಸೋದ್ಯಮ ದೃಷ್ಟಿಯಿಂದ ಮತ್ತಷ್ಟು ಮಹತ್ವ ಪಡೆಯಲಿದೆ. ಬಂಗಾರೇಶ್ವರ ಸೇವಾ ಅಭಿವೃದ್ಧಿ ಟ್ರಸ್ಟ ವತಿಯಿಂದ ಮನುವಿಕಾಸ ಸಂಸ್ಥೆಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು. ಜಿಪಂ ಸದಸ್ಯೆ ರೂಪಾ ನಾಯ್ಕ, ಬರಗಾಲ ಮತ್ತು ನೀರಿನ
ಕೊರತೆ ಸಂದರ್ಭದಲ್ಲಿ ಮನುವಿಕಾಸದ ಕೆಲಸ ಬಹಳ ಪ್ರಸ್ತುತವಾಗಿದೆ. ಸಂಸ್ಥೆ ನೀರು ಸಂರಕ್ಷಣೆಯೊಂದಿಗೆ ಮಹಿಳಾ ಸಬಲೀಕರಣ, ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತಿತರ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ. ರೈತರು ತಮ್ಮ ಹೊಲಗಳಿಗೆ ಮಣ್ಣನ್ನು ಸಾಗಿಸುವ ಮೂಲಕ ಕೆರೆ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ನಿರ್ದೇಶಕ ಗಣಪತಿ ಭಟ್ಟ, ಮನುವಿಕಾಸ ಸಂಸ್ಥೆ ಸಿದ್ದಾಪುರ ತಾಲೂಕಿನ ಕರ್ಜಗಿ ಎನ್ನುವ ಕುಗ್ರಾಮದಲ್ಲಿ ಪ್ರಾರಂಭವಾಗಿ ಈಗ ಜಿಲ್ಲೆಯಾದ್ಯಂತ ವಿವಿಧ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಸಂಸ್ಥೆಯಿಂದ 2500ಕ್ಕೂ ಹೆಚ್ಚು ಸಣ್ಣ ಕೆರೆಗಳನ್ನು ಮತ್ತು ಕೃಷಿ ಹೊಂಡಗಳನ್ನು ರೈತರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಅಣ್ಣಾಜಿ ಗೌಡ, ಸದಸ್ಯರಾದ ಅಶೋಕ ನಾಯ್ಕ ಮದರವಳ್ಳಿ, ಶಿವಶಂಕರ ಗೌಡ ಕಂತ್ರಾಜಿ, ಸಂಸ್ಥೆಯ ಸಂಸ್ಥಾಪಕ ಹರಿಶ್ಚಂದ್ರ ಭಟ್ಟ, ಡಾ| ಅಬ್ದುಲ್ ರವೂಫ್, ಎಪಿಎಂಸಿ ಸದಸ್ಯ ಪ್ರಶಾಂತ ಗೌಡರ್, ಸ್ಥಳೀಯ ಮುಖಂಡ ಸುಧಾಕರ ನಾಯ್ಕ, ಕಾಂಗ್ರೆಸ್ ಮುಖಂಡ ದ್ಯಾಮಣ್ಣಾ ದೊಡ್ಮನಿ, ಬೋಜಪ್ಪಾ ನಾಯ್ಕ, ದೇವೇಂದ್ರ ನಾಯ್ಕ, ಎಚ್.ಕೆ ನಾಯ್ಕ ಮತ್ತಿತರರು
ಉಪಸ್ಥಿತರಿದ್ದರು. ಡಿ.ಜಿ. ಭಟ್ಟ ಸ್ವಾಗತಿಸಿದರು. ರಘು ನಾಯ್ಕ ವಂದಿಸಿದರು.