ಯಲ್ಲಾಪುರ : ಇಂದಿನ ದಿನಗಳಲ್ಲಿ ಮಾನವನು ಸ್ವಾವಲಂಬನೆಯ ಸಾಧ್ಯತೆಗಳನ್ನು ಧಿಕ್ಕರಿಸಿ ಪರಾವಲಂಬನೆ ಎಡೆಗೆ ಸಾಗುತ್ತಿರುವುದು ಕೃಷಿ ಕ್ಷೇತ್ರದ ಎಲ್ಲ ದುರಂತಗಳಿಗೆ ಮೂಲವಾಗಿದೆ ಎಂದು ಕತೆಗಾರ ಡಾ ಶ್ರೀಧರ ಬಳಗಾರ ಹೇಳಿದರು.
ಅವರು ತಾಲೂಕಿನ ಹಾಸಣಗಿ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ಸಭಾ ಭವನದಲ್ಲಿ ಹಮ್ಮಿಕೊಂಡ ಗ್ರಾಮ ಲೋಕ-ವಾಸ್ತವ ಮತ್ತು ಕನಸುಗಳು ಎಂಬ ವಿಷಯದ ಕುರಿತಾದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಕೃಷಿಯನ್ನು ಯಾವುದೇ ಪ್ರಲೋಭನೆಗೆ ಒಳಗಾಗಿ ಕೇವಲ ಲಾಭದ ದೃಷ್ಟಿಯಿಂದ ನೋಡಬೇಕೇ ಅಥವಾ ಅದನ್ನು ನಮ್ಮ ಜೀವನ ವಿಧಾನವಾಗಿ ಪರಿಗಣಿಸಿ ನಮ್ಮ ಮಾನಸಿಕ ಶಾಂತಿ ನೆಮ್ಮದಿಯ ಮಾಧ್ಯಮವೆಂದು ಬಗೆಯಬೇಕೆ ಎಂಬುದೇ ಇಂದಿನ ಕೃಷಿಕರ ಗೊಂದಲವಾಗಿದೆ ಎಂದರು.
ತಮ್ಮ ಭೂಮಿಯನ್ನು ಕಾರ್ಖಾನೆಯನ್ನಾಗಿ ಭಾವಿಸಲಾರಂಬಿಸಿದ ರೈತರು ಕೃಷಿಯನ್ನು ಜೀವನ ಪದ್ಧತಿಯನ್ನಾಗಿ ಸ್ವೀಕರಿಸದೆ ಕ್ಷಿಪ್ರ ಲಾಭದ ಆಸೆಯಿಂದ ರಾಸಾಯನಿಕ ಬಳಕೆ ಮಾಡತೊಡಗಿದ್ದು, ಕೃಷಿ ವಾಸ್ತವಿಕತೆ ಕಳೆದುಕೊಳ್ಳಲು ಕಾರಣ ಎಂದು ಅಭಿಪ್ರಾಯಪಟ್ಟರು.
ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ ಜಗತ್ತಿನ ವಿವಿಧ ಸಂಗತಿಗಳ ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಿದಂತೆ ಕೃಷಿ ಚರಿತ್ರೆಯನ್ನು ಓದಲು ನಾವು ಗಮನ ಹರಿಸಿದಿರುವ ನಡುವೆ ಸುಸ್ಥಿರತೆ ಎಂಬುದು ನಮ್ಮ ಕಿಸೆಯ ತೂತಿನಲ್ಲಿ ಸೋರಿ ಹೋಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಭೂಮಿಯನ್ನು ನಂಬಿದವರು ಯಾರೂ ಸೋತಿಲ್ಲವೆಂಬುದು ಅಧ್ಯಯನದ ಮೂಲಕ ದೃಢಪಟ್ಟ ಸಂಗತಿಯಾಗಿದೆ, ಅಭಿವೃದ್ಧಿಯ ನೆಪದಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಿಗೂ ವಾಸ್ತವಿಕತೆಯ ಹಿನ್ನೆಲೆ ಮತ್ತು ಅಡಿಪಾಯವೇ ಇರದಂತಾಗಿದೆ ಎಂದರು.
ಸುಸ್ಥಿರ ಅಭಿವೃದ್ಧಿ ಚಿಂತಕ ಡಾ ಪ್ರಕಾಶ ಭಟ್ ದಾರವಾಡ ಮಾತನಾಡಿ, ಸ್ವಾವಲಂಬನೆಯೊಂದೇ ನಮ್ಮ ಅಭಿವೃದ್ಧಿಗೆ ಸೂಕ್ತ ದಾರಿಯಾಗಿದ್ದು. ಕೇವಲ ಹಣವೇ ಎಲ್ಲಕ್ಕೂ ಪ್ರಧಾನವಲ್ಲ ಎಂದು ಹೇಳಿದ ಅವರು, ನಮ್ಮ ದೇಶದ ಕೃಷಿಕರ ಸಮಸ್ಯೆಗಳೆಲ್ಲ ಬಹುಮಟ್ಟಿಗೆ ಸಾರ್ವತ್ರಿಕವಾಗಿವೆ. ವೈಚಾರಿಕತೆಯನ್ನು ವಿಭಜಿಸಿ ನೋಡುವ ಸಂದರ್ಭದಲ್ಲಿ ಬೇರು ಮಟ್ಟದ ಸಂಸ್ಕೃತಿ ಮರೆಯುವುದು ಅಪಾಯಕಾರಿ ಎಂದು ಎಚ್ಚರಿಸಿದರು.
ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್ ಎನ್ ಹೆಗಡೆ ಗೋರ್ಸಗದ್ದೆ ವೇದಿಕೆಯಲ್ಲಿದ್ದರು. ವಾಸುಕಿ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯ ನಿರ್ವಾಹಕ ಜಿ ಜಿ ಹೆಗಡೆ ವಂದಿಸಿದರು.