ಯಲ್ಲಾಪುರ : ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಕಳೆದ ಐದು ವರ್ಷಗಳಲ್ಲಾಗಿದೆ, ಬಿ.ಜೆ.ಪಿ ಪಕ್ಷದವರು ಇಲ್ಲಗಳಪುರ ಎಂದು ಸುಳ್ಳು ಹೇಳಿಕೆಗಳನ್ನು ನೀಡುವುದು, ಸುಳ್ಳು ವಾಟ್ಸಪ್ ಬರಹದ ಮೂಲಕ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ, ಜನ ಪ್ರಜ್ಞಾವಂತರಿದ್ದು ಬಿ.ಜೆ.ಪಿಯವರ ಮೋಸದ ಹೇಳಿಕೆಯನ್ನು ನಮಬುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಮಾ.8 ರಂದು ಬೆಳಿಗ್ಗೆ ಪಟ್ಟಣದ ಬೆಲ್ ರಸ್ತೆ ಮತ್ತು ಮುಂಡಗೋಡ ರಸ್ತೆಯ 1 ಕೋಟಿ ರೂ ನ ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ನಾನು ಶಾಸಕನಾಗುವ ಮೊದಲು 20 ವರ್ಷ ಬಿ.ಜೆ.ಪಿ ಶಾಸಕರೇ ಯಲ್ಲಾಪುರವನ್ನು ಪ್ರತಿನಿಧಿಸಿದ್ದಾರೆ. ಆಗಿನ ಸ್ಥಿತಿಯನ್ನು ಪ್ರಜ್ಞಾವಂತರಾದವರು ನೆನಪು ಮಾಡಿಕೊಳ್ಳಲಿ. ನನ್ನ ಈ 5 ವರ್ಷದ ಅವಧಿಯಲ್ಲಿ ಮಾಡಿದ ಕಾರ್ಯದ ಬಗ್ಗೆ ವಿವರಣೆ ಕೊಡುವುದಕ್ಕೆ ಪುಟಗಟ್ಟಲೆ ಬೇಕಾದಿತು. ಪ್ರಜ್ಞಾವಂತರಾದ ನಮ್ಮ ಕ್ಷೇತ್ರದ ಜನರು ಅಭಿವೃದ್ಧಿಯ ಕುರಿತು ಮಾತನಾಡುವ ಬಿ.ಜೆ.ಪಿಯವರಿಗೆ ಉತ್ತರ ನೀಡಬೇಕಾಗಿದೆ ಎಂದ ಅವರು, ಹೆಬ್ಬಾರರು ಶಾಸಕರಾದರೆ ಎಲ್ಲಡೆ ಕಸಾಯಿ ಕಾರ್ಖಾನೆ ಆಗುತ್ತದೆ ಎಂದು ಕರಪತ್ರ ಹಂಚಿದರು. ಹೀಗೆ ಇಂತಹ ಅನೇಕ ಸುಳ್ಳಿನ ಕಂತೆಯನ್ನು ಬಿ.ಜೆ.ಪಿಯವರು ಪತ್ರಿಕಾ ಹೇಳಿಕೆ, ವಾಟ್ಸಪ್ ಮೂಲಕ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಭಿವೃದ್ಧಿ ಕನಸಾಗಿತ್ತು. ಅದನ್ನು ನನಸು ಮಾಡಿದ ಸಮಾಧಾನ ಹಾಗೂ ಮತದಾರರಿಗೆ ನೀಡಿದ ಭರವಸೆ ಈಡೇರಿಸಿದ ಸಂತಸ ನನಗಿದೆ. ಸರ್ಕಾರಿ ಆಸ್ಪತ್ರೆ, ಅಗ್ನಿಶಾಮಕ ಠಾಣೆ, ತಹಶೀಲ್ದಾರ ಕಚೇರಿ ಸೇರಿದಂತೆ ಹತ್ತಾರು ಅಭಿವೃದ್ಧಿಯಲ್ಲಿ ಹೆಜ್ಜೆ ಹಾಕಲಾಗಿದೆ. ಈ ಅಭಿವೃದ್ಧಿ ಕಾರ್ಯ ನಡೆಯುವಾಗ ಬಿ.ಜೆ.ಪಿಯವರು ಕಣ್ಣುಮುಚ್ಚಿ ಕುಳಿತಿದ್ದಾರೆಯೇ, ಅವರು ಸುಳ್ಳನ್ನು ಹೇಳುವುದನ್ನು ಬಿಟ್ಟರೆ ಬೇರೆನಾದರೂ ಅಭಿವೃದ್ಧಿಯ ಮಾತನಾಡುವ ನೈತಿಕತೆ ಉಳಿಸಿಕೊಂಡಿದ್ದಾರೆಯ, ಸುಳ್ಳನ್ನು ಹೇಳುವುದು ಸರಿಯೇ ಎಂದು ಪ್ರಶ್ನಿಸಿದ ಅವರು ಅಭಿವೃದ್ಧಿ ಪಕ್ಷಾತೀತವಾಗಿರಬೇಕು. ಆರೋಪ ಮಾಡುವಾಗ ವಸ್ತುನಿಷ್ಟವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಶಿರೀಷ ಪ್ರಭು, ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ವಿಜಯ ಮಿರಾಶಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಎಸ್.ಎಸ್.ಜಿಗಳೂರ್, ವಿಶಾಲ್ ಕಠಾವಕರ್, ಗುತ್ತಿಗೆದಾರ ಸುಧೀರ ಪಂಡಿತ್, ಸ್ಥಳೀಯ ಪ್ರಮುಖರಾದ ಜಗದೀಶ ದೀಕ್ಷಿತ್, ಮಾಧವ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.