ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರದ ಅರೋಪ ಕೇಳಿ ಬಂದ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಉಡುಪಿ, ಮಂಗಳೂರು, ಧಾರವಾಡ, ಬೆಳಗಾವಿ ಗಂಗಾವತಿ ಸೇರಿದಂತೆ 6 ಕಡೆ ದಾಳಿ ನಡೆದಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಉಡುಪಿ ಮತ್ತು ಮಂಗಳೂರಿನ ಅಬಕಾರಿ ಉಪ ಅಧೀಕ್ಷಕ ವಿನೋದ್ ಕುಮಾರ್ ನಿವಾಸ ಮತ್ತು ಕಚೇರಿಯ ಮೇಲೆ ಜಂಟಿ ದಾಳಿ ನಡೆಸಲಾಗಿದೆ.
ಮಂಗಳೂರಿನ ಕುಂಟಿಕಾನ ಮನೆ ಹಾಗೂ ಕಛೇರಿ , ಚಾಲಕನ ನಿವಾಸದ ಮೇಲೂ ಮಂಗಳೂರು ಮತ್ತು ಉಡುಪಿ ಎಸಿಬಿ ಅಧಿಕಾರಿಗಳ ಬೆಳಿಗ್ಗೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಿನೋದ್ ಕುಮಾರ್ ವಿರುದ್ಧ ಉಡುಪಿಯಲ್ಲಿ ದೂರು ದಾಖಲಾಗಿತ್ತು.
ಗಂಗಾವತಿ ಜಿ.ಪಂ.ಉಪವಿಭಾಗೀಯ ಎಇಇ ವಿಜಯಕುಮಾರ್ ನಿವಾಸ, ಕಚೇರಿ ಮೇಲೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ತಿಪಟೂರಿನ ಚಿಕ್ಕನಾಯಕನ ಹಳ್ಳಿಯಲ್ಲಿ ಕಡೂರು ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.
ಕೋಲಾರದ ಮುಳಬಾಗಿಲುವಿನ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಅಪ್ಪಿರೆಡ್ಡಿ ಗೆ ಸೇರಿದ 5 ಕಡೆ ದಾಳಿ ನಡೆಸಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರಾಜೇಶ್ವರಿ ಜೈನಾಪುರ ಅವರ ನಿವಾಸ, ಕಚೇರಿ, ಪತಿಯ ಮನೆಯ ಮೇಲೂ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.