ಕಾರವಾರ: ಬುಧವಾರ ರಾತ್ರಿ ಹೊನ್ನಾವರದ ಕರ್ಕಿನಾಕಾದ ಬಳಿ ಗೋ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ದುಷ್ಕರ್ಮಿಗಳನ್ನು ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸುವಾಗ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಗೋ ಕಳ್ಳಸಾಗಾಣಿಕೆದಾರ ದುಷ್ಕರ್ಮಿಗಳು ಗಾಯಗೊಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ಕಾರ್ಯಕರ್ತರು ಹಾಗೂ ಗೋ ಪ್ರೇಮಿಗಳ ವಿರುದ್ಧ ಕೊಲೆಯತ್ನದಂತಹ ಗಂಭೀರ ಆರೋಪಗಳನ್ನು ಹೊರಿಸಿ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ ನಾಯಕ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲವರ್ಷದಿಂದ ಅದರಲ್ಲೂ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಕರಾವಳಿ ಪ್ರದೇಶವು ಗೋ ಕಳ್ಳಸಾಗಾಣಿಕೆದಾರರ ಸ್ವರ್ಗವಾಗಿ ಬದಲಾಗಿದೆ. ಇಡೀ ಕರಾವಳಿಯು ಜಿಹಾದಿಗಳ ಆಡುಂಬೋಲವಾಗಿ ಬದಲಾಗಿದ್ದು ಈ ಜನರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕಾನೂನನ್ನು ಮುರಿದು ಗೋ ಕಳ್ಳಸಾಗಣಿಕೆ ನಡೆಸುತ್ತಿರುವ ಭಟ್ಕಳದ ‘ಅಕ್ರಮ ಕಸಾಯಿಖಾನೆ ಮಾಫಿಯಾ’ಗಳನ್ನು ಹದ್ದುಬಸ್ತಿನಲ್ಲಿಡಲು ರಾಜ್ಯ ಸರಕಾರ ವಿಫಲವಾಗಿದ್ದು ಸರಕಾರದ ವೋಟ್ ಬ್ಯಾಂಕ್ ರಾಜಕೀಯದಿಂದಾಗಿ ಈ ಕಸಾಯಿಖಾನೆ ಮಾಫಿಯಾಗಳು ಈಗ ಇಡಿ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆಯುತ್ತಿವೆ. ಕಾನೂನು ಬಾಹಿರ ಕಸಾಯಿಖಾನೆಗಳನ್ನು ಜಿಲ್ಲೆಯ ಭಟ್ಕಳದಲ್ಲಿ ಈ ಮಾಫಿಯಾ ನಡೆಸುತ್ತಿದ್ದು ಈ ಚಟುವಟಿಕೆಯನ್ನು ನಿಯಂತ್ರಿಸಲು ಪೊಲಿಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು.
ಬುಧವಾರ ರಾತ್ರಿ ಭಟ್ಕಳದ ಮುಸ್ಲಿಂ ಸಮೂದಾಯಕ್ಕೆ ಸೇರಿದ್ದ ಇಬ್ಬರು ಗೋ ಕಳ್ಳಸಾಗಾಣಿಕೆದಾರರು ಮಾದನಗೇರಿಯಿಂದ ಅಕೃಮವಾಗಿ ಹಲವು ಆಕಳುಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸುತ್ತಿದ್ದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಈ ಕಳ್ಳಸಾಗಾಣಿಕೆದಾರರು ತಾವು ಭಟ್ಕಳದ ನಿವಾಸಿಯಾಗಿರುವ ತಮ್ಮ ಯಜಮಾನನ ಅಣತಿಯಂತೆ ವಿವಾಹ ಸಮಾರಂಭವೊಂದರಲ್ಲಿ ಕಡಿಯಲು ಈ ಆಕಳುಗಳನ್ನು ಸಾಗಾಣಿಕೆ ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದಾರೆ ಎಂದು ಪ್ರಸ್ಥಾಪ ಮಾಡಿದ ಅವರು ಸಾರ್ವಜನಿಕರ ಹೇಳಿಯ ಪ್ರಕಾರ ಈ ವಾಹನ ಹೊನ್ನಾವರದ ಬಳಿ ಬಂದಾಗ ಅದರಲ್ಲಿನ ಗೋವುಗಳ ಸ್ಥಿತಿಯನ್ನು ಕಂಡ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಪೊಲಿಸರನ್ನು ಕರೆಯುವ ಉದ್ದೇಶದಿಂದ ಈ ವಾಹನವನ್ನು ತಡೆದಿದ್ದಾರೆ. ಅಲ್ಲಿ ಕುತೂಹಲದಿಂದ ಜನ ಗುಂಪುಗೂಡಿದ್ದಾಗಿ ತಿಳಿದು ಬಂದಿದೆ. ಜನರಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲವಾದಾಗ ಈ ಗೋ ಕಳ್ಳಸಾಗಾಣಿಕೆದಾರರು ಸಾರ್ವಜನಿಕರ ಮೇಲೆ ಮಾರಕ ಹಲ್ಲೆಗೆ ಯತ್ನಿಸಿದ್ದಾರಲ್ಲದೇ ಓಡಿ ಹೋಗುವ ಭರದಲ್ಲಿ ಬಿದ್ದು ಗಾಯಗೊಡಿದ್ದಾರೆ ಎಂದು ತಿಳಿದುಬಂದಿದೆ ಎಂದರು.
ಈ ಗೋ ಕಳ್ಳಸಾಗಾಣಿಕೆದಾರರೂ ಅಲ್ಲಿದ್ದ ಸಾರ್ವಜನಿಕರ ಮೇಲೆ ಮಾರಕ ಅಸ್ತ್ರಗಳಿಂದ ದಾಳಿಗೆ ಪ್ರಯತ್ನಿಸಿದ್ದಾಗಿ ಆರೋಪಗಳು ಕೇಳಿ ಬಂದಿವೆ. ಆ ನಂತರ ಪೊಲಿಸರು ಈ ಕಳ್ಳಸಾಗಾಣಿಕೆದಾರರನ್ನು ಕರೆದೊಯ್ದಿದ್ದಾರೆ.
ಯಾರಾದರೂ ಕಾನೂನು ವಿರೋಧಿ ಕೃತ್ಯದಲ್ಲಿ ತೊಡಗಿದ್ದರೆ ಅವರನ್ನು ತಡೆದು ಪೋಲೀಸರಿಗೆ ಒಪ್ಪಿಸುವುದು ಕಾನೂನುಬದ್ಧವಾಗಿದ್ದು ಹೊನ್ನಾವರದ ಹಿಂದೂ ಯುವಕರು ಅದನ್ನೇ ಮಾಡಿದ್ದಾರೆ. ಆದರೆ ಈ ಹಿಂದು ಯುವಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನೇ ಬಲಿಪಶುಗಳಾಗಿಸಲು ಪೊಲಿಸರು ಕುತಂತ್ರ ನಡೆಸಿದ್ದು ಗೋ ಕಳ್ಳಸಾಗಾಣಿಕೆದಾರರನ್ನು ರಕ್ಷಿಸಲು ತಿಪ್ಪರಲಾಗ ಹಾಕುತ್ತಿದ್ದಾರೆ ಎಂದರು.
ಆನಂತರ ಸುನಿಯೋಜಿತ ರೀತಿಯಲ್ಲಿ ಈ ಗೋ ಕಳ್ಳಸಾಗಾಣಿಕೆದಾರರ ರಕ್ಷಣೆಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ. ಈ ಕಳ್ಳಸಾಗಾಣಿಕೆದಾರರಿಂದ ಹಲ್ಲೆಗೊಳಗಾದ ಜನರು ಠಾಣೆಗೆ ಬಂದು ಅವರ ವಿರುದ್ಧ ದೂರು ದಾಖಲಿಸದಂತೆ ತಡೆಯಲು 150 ಜನರು ಈ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ದೂರನ್ನು ದಾಖಲಿಸಲಾಗಿದೆ. ಗೋ ಕಳ್ಳಸಾಗಾಣಿಕೆದಾರರಿಂದ ಹಲ್ಲೆಗೊಳಗಾದ ಯಾವುದಾದರೂ ವ್ಯಕ್ತಿಗಳು ಈ ಗೋ ಕಳ್ಳಸಾಗಾಣಿಕೆದಾರರ ವಿರುದ್ಧ ಹಲ್ಲೆಯ ದೂರು ನೀಡಲು ಬಂದರೆ ಅವರನ್ನು ಈ 150 ಜನರಲ್ಲಿ ಸೇರಿಸಿ ಬಂಧಿಸಿ ಈ ಗೋ ಕಳ್ಳಸಾಗಾಣಿಕೆದಾರರನ್ನು ರಕ್ಷಿಸಲು ಸರಕಾರದ ಉನ್ನತ ಮಟ್ಟದಲ್ಲಿ ಸಂಚು ನಡೆಸಿರುವ ಸಂಶಯವಿದೆ. ಅಲ್ಲದೇ ಈ ಗೋ ಕಳ್ಳಸಾಗಾಣಿಕೆದಾರರು ತಮ್ಮ ಕೊಲೆಗೆ 150 ಜನ ಯತ್ನ ನಡೆಸಿದರು ಎಂದು ದೂರು ನೀಡಿದ್ದಾಗಿ ತಿಳಿದುಬಂದಿದೆ. 150 ಜನರಿಂದ ಮರಣಾಂತಿಕವಾಗಿ ಹಲ್ಲೆಗೊಳಗಾಗಿದ್ದಾರೆ ಎಂದು ಆರೋಪಿಸುತ್ತಿರುವ ಈ ವ್ಯಕ್ತಿಗಳು ಮಾಧ್ಯಮದೊಡನೆ ಆರಾಮವಾಗಿ ಮಾತಾಡಿದ್ದಾರೆ. ಅಲ್ಲದೇ ಚಿಕ್ಕಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಅದು ಈಗಾಗಲೇ ಟಿವಿಯಲ್ಲಿ ಬಿತ್ತರವಾಗಿದೆ. ಇವರನ್ನು ಖಾಸಗಿ ಕಾರ್ಪೋರೇಟ್ ಆಸ್ಪತ್ರೆಗೆ ವರ್ಗಾಯಿಸಿದ್ದು ಸಂಶಯಕ್ಕೆ ಕಾರಣವಾಗಿದ್ದು ಚಿಕ್ಕ ಗಾಯಗಳನ್ನೇ ದೊಡ್ಡದಾಗಿ ದಾಖಲೆಯಲ್ಲಿ ತೋರಿಸಲು ಸರಕಾರದ ಮಟ್ಟದಲ್ಲಿ ಸಂಚುನಡೆಸಿರುವ ಸಂಶಯವಿದೆ ಎಂದಿದ್ದಾರೆ.
ಉಕ ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿಗಳು ಈ ಗೋಕಳ್ಳಸಾಗಾಣಿಕಾದಾರ ಮೇಲೆ ನಡೆದಿದೆ ಎನ್ನಲಾದ ಆರೋಪಿತ ಹಲ್ಲೆಯ ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಈ ವ್ಯಕ್ತಿಗಳು ಯಾರ ಆಣತಿಯ ಮೇರೆಗೆ ಆಕಳುಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದರು? ಈ ಗೋವುಗಳನ್ನು ಕಳ್ಳಸಾಗಾಣಿಕೆ ನಡೆಸುವಂತೆ ಇವರಿಗೆ ಆದೇಶ ನೀಡಿದ ಭಟ್ಕಳದ ‘ಯಜಮಾನ’ ಯಾರು? ಇವನ್ನು ಭಟ್ಕಳದಲ್ಲಿ ಎಲ್ಲಿ ಕಡಿಯಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಿ. ಇಷ್ಟೊಂದು ಚೆಕ್‍ಪೋಸ್ಟಗಳನ್ನು ಹಾಗೂ ಮೂರ್ಕಾಲ್ಕು ಪೊಲಿಸ್ ಠಾಣೆಯ ಪರಿಧಿಗಳನ್ನು ದಾಟಿ ಈ ಗೋವುಗಳನ್ನು ಹೊನ್ನಾವರದವರೆಗೆ ಹೇಗೆ ಸಾಗಿಸಿದರು? ಎಂಬುದನ್ನು ಪ್ರಶ್ನಿಸಿದರು.
ಅಲ್ಲದೇ ಸ್ವತ: ತಾನು ಗೋಮಾಂಸ ತಿನ್ನುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯನವರು ಘೋಷಿಸಿಕೊಂಡಿರುವುದು ಈ ಗೋ ಕಳ್ಳಸಾಗಾಣಿಕೆದಾರರಿಗೆ ಪ್ರಚೋದನೆ ನೀಡಿದೆ. ಭಟ್ಕಳದಲ್ಲಿರುವ ಎಲ್ಲ ಕಸಾಯಿಖಾನೆ ಮಾಫಿಯಾಗಳನ್ನು ತಕ್ಷಣ ಬಂಧಿಸಿಬೇಕು. ಹಾಗೂ ತನಿಖೆಯಲ್ಲಿ ಕಾಂಗ್ರೆಸ್ ರಾಜಕಾರಣಿಗಳು ಮೂಗುತೂರಿಸುವುದನ್ನು ಬಿಡಬೇಕು. ಅಲ್ಲದೇ ಈಗ ಬಂಧನಕ್ಕೊಳಗಾಗಿರುವ ಎಲ್ಲ ಅಮಾಯಕ ಹಿಂದು ಯುವಕರನ್ನೂ ಬಿಡುಗಡೆ ಮಾಡಬೇಕು ಅಲ್ಲದೇ ಸುಳ್ಳು ಮೊಕದ್ದಮೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕುಮಟಾ ಮಂಡಳದ ಅಧ್ಯಕ್ಷ ಕುಮಾರ ಮಾರ್ಕಾಂಡೇ, ಗಣಪತಿ ಉಳ್ವೇಕರ, ಮಾರುತಿ ನಾಯ್ಕ, ಮನೋಜ ಭಟ್, ಕಿಶನ್ ಕಾಂಬ್ಳೆ, ನಾಗೇಶ್ ಬುರ್ಡೇಕರ್ ಇದ್ದರು.