ಕುಮಟಾ (ಉತ್ತರ ಕನ್ನಡ): ಪಟ್ಟಣದ ರಸ್ತೆ ಬದಿಯಲ್ಲಿ ಯಾರೇ ಪ್ಲಾಸ್ಟಿಕ್ ತ್ಯಾಜ್ಯ ಎಸೆದರೂ ಅಲ್ಲಿಗೆ ಸಣಕಲು ದೇಹದ ವಯಸ್ಸಾದ ವಿದೇಶಿ ಮಹಿಳೆ ಸ್ಕೂಟಿಯಲ್ಲಿ ಹಾಜರಾಗುತ್ತಾರೆ. ಬಿದ್ದ ತ್ಯಾಜ್ಯವನ್ನು ಎತ್ತಿ ಸಮೀಪದ ಕಸದಬುಟ್ಟಿಗೆ ಹಾಕುತ್ತಾರೆ. ಸ್ವಚ್ಛತೆ ಕುರಿತು ಕ್ರಮವಹಿಸದಿರುವ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತಾರೆ…

ಆಯುರ್ವೇದ ಅಧ್ಯಯನಕ್ಕಾಗಿ ಭಾರತಕ್ಕೆ ಬಂದು ಇಲ್ಲಿಯ ಪರಿಸರವನ್ನು ಕೈಲಾದ ಮಟ್ಟಿಗೆ ಉಳಿಸುವ ಕನಸು ಕಂಡ ಪರಿಸರ ಪ್ರೇಮಿ ಪೋರ್ಚುಗಲ್ ದೇಶದ ಡಾ.ಆ್ಯನಾ ಅವರ ಕಾಳಜಿ ಇದು.

RELATED ARTICLES  ಚಳಿ ಚಳಿ ತಾಳೆನೋ ಈ ಚಳಿಯಾ!!! ಉತ್ತರ ಕನ್ನಡದಲ್ಲಿ ಚಳಿ ಎಫೆಕ್ಟ!

ಪೋರ್ಚುಗಲ್‌ನ ಚಾಮ್ ವಿಶ್ವವಿದ್ಯಾಲಯದಲ್ಲಿ ಮಾನವಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದ ಆ್ಯನಾ, ಅಲ್ಲಿಯೇ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದರು. ನಿವೃತ್ತಿ ನಂತರ ಆಯುರ್ವೇದ ಅಧ್ಯಯನಕ್ಕಾಗಿ 1990ರಲ್ಲಿ ಪುಣೆಗೆ ಬಂದರು. ಬಳಿಕ ಕುಮಟಾಕ್ಕೆ ಬಂದು ಇಲ್ಲಿಯೇ ನೆಲೆಗೊಂಡರು. ಪೋರ್ಚುಗಲ್‌ನಲ್ಲಿ ಮಕ್ಕಳಿದ್ದು, ಅವರನ್ನು ನೋಡಲು ಆರು ತಿಂಗಳಿಗೊಮ್ಮೆ ಅಲ್ಲಿಗೆ ಹೋಗಿ ಬರುತ್ತಾರೆ.

ಪರಿಸರ ರಕ್ಷಣೆಗೆಂದು ಆ್ಯನಾ ‘ಖುಷಿ ಪರಿಸರ ಸಂಘ’ ಸ್ಥಾಪಿಸಿದ್ದು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ. ನಿತ್ಯವೂ ಬೆಳಿಗ್ಗೆ 5 ಗಂಟೆಗೆ ಅವರ ಕಸದ ‘ಬೇಟೆ’ ಆರಂಭವಾಗುತ್ತದೆ.

RELATED ARTICLES  ನೂತನ ಮುಖ್ಯಮಂತ್ರಿಗಳು ನಾಳೆ ಉತ್ತರಕನ್ನಡಕ್ಕೆ..!

‘ಆ್ಯನಾ ಮಾತನಾಡುವುದು ತೀರಾ ಕಡಿಮೆ. ಬದಲಾಗಿ ಅವರ ಪೆನ್ನು ಹೆಚ್ಚು ಕೆಲಸ ಮಾಡುತ್ತದೆ. ಎಲ್ಲೇ ಪ್ಲಾಸ್ಟಿಕ್ ಕಂಡರೂ ನೀವು ಪ್ಲಾಸ್ಟಿಕ್ ನಿಷೇಧಿಸಿದ್ದೀರಿ. ಆದರೆ, ಎಲ್ಲೆಡೆ ಅದು ಹಾರಾಡುತ್ತಿದೆಯಲ್ಲ? ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದುಬಿಡುತ್ತಾರೆ’ ಎನ್ನುತ್ತಾರೆ ಸಂಘದ ಸದಸ್ಯೆ ಪ್ರೊ.ಗೀತಾ ನಾಯಕ.